1
1

ಬೀದರ, ಫೆಬ್ರವರಿ.20 :- ಸಮಾಜದಲ್ಲಿ ಜಾತಿ, ವರ್ಗ, ವರ್ಣ ಭೇದ ಎನ್ನದೇ ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ಆಯೋಜಿಸಿದ ಸಂತ ಕವಿ ಸರ್ವಜ್ಞ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇಂದಿಗೂ ಬೇರೂರಿರುವ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸಲು ಸರ್ವಜ್ಞ ಸೇರಿದಂತೆ ಅನೇಕ ಮಹಾತ್ಮರ ಮಾನವೀಯ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕುಂಬಾರ ಸಮಾಜದ ಇತಿಹಾಸ ತುಂಬಾ ಪ್ರಾಚೀನವಾಗಿದೆ. ಕುಂಬಾರಿಕೆ ವೃತ್ತಿ ವೈಜ್ಞಾನಿಕವಾಗಿದ್ದು, ಎಲ್ಲರೂ ಮಣ್ಣಿನ ಪರಿಕರಗಳನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು.
ಯುವ ಸಾಹಿತಿ ಈಶ್ವರ ರುಮ್ಮಾ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸರ್ವಜ್ಞರ ತ್ರಿಪದಿಗಳು ಆದರ್ಶವಾಗಿವೆ. ಸರ್ವಜ್ಞ ಲಕ್ಷಾಂತರ ತ್ರಿಪದಿಗಳ ಮೂಲಕ ಸಮಾಜದ ಎಲ್ಲ ಕ್ಷೇತ್ರಗಳ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದರು. ಸಮಾಜದಲ್ಲಿನ ಮೌಢ್ಯ, ಕಂದಾಚಾರ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ಸರ್ವಜ್ಞ ಕಠೋರವಾಗಿ ಟೀಕಿಸಿದರು. ಸ್ತ್ರೀ ಸಮಾನತೆಯ ಚಿಂತನೆಗಳನ್ನು ತ್ರಿಪದಿಗಳಲ್ಲಿ ಕಾಣಬಹುದು. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಸರ್ವಜ್ಞರ ತ್ರಿಪದಿಗಳ ಮೈಗೂಡಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ನಾವು ಮಹಾತ್ಮರಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಪೂಜೆ ಸಲ್ಲಿಸಿದರು. ಬಳಿಕ ಸಂತಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮAದಿರಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಬೀದರ್ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜಿಲ್ಲಾ ಕುಂಬಾರ ಸಮಾಜದ ಮುಖಂಡ ವಿಠಲ ಕುಂಬಾರ ಸೇರಿದಂತೆ ಮುಖಂಡರಾದ ನಾಗರಾಜ ಕರ್ಪೂರ್, ಶಿವಾನಂದ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ರಾಜಕುಮಾರ ಕುಂಬಾರ, ಬಾಲಾಜಿ ಕುಂಬಾರ, ಕಾಶಿನಾಥ್ ಕುಂಬಾರ, ಶ್ರೀಕಾಂತ್ ಕುಂಬಾರ, ಪವನ್ ಕುಂಬಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸಾರ್ವಜನಿಕರು ಸೇರಿದಂತೆ ಕುಂಬಾರ ಸಮಾಜದವರು ಉಪಸ್ಥಿತರಿದ್ದರು.