Popular Posts

ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಸಮೀಕ್ಷೆ: ಅಫ್ರ‍್ರಾನಾಜ್

ಬೀದರ್: ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ ೮೦ ರಷ್ಟು ಪಾಲಕರು ೧೬ ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಅಫ್ರಾನಾಜ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈಗಾಗಲೇ ಆಸ್ಟ್ರೇಲಿಯಾದಲ್ಲಿ ೧೬ ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಅಂತಹುದೇ ಕಾನೂನನ್ನು ದೇಶದಲ್ಲೂ ಜಾರಿಗೆ ತರಬೇಕು ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮ, ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಹಾಗೂ ಸ್ವಚ್ಛ ಭಾರತ ಅಭಿಯಾನ ಕುರಿತು ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿದರು ಎಂದು ಹೇಳಿದರು.
ಮೂರು ವಿಷಯಗಳ ಕುರಿತು ಜನವರಿ ೧೦ ರಿಂದ ಫೆಬ್ರುವರಿ ೫ ರ ವರೆಗೆ ನಡೆದ ಸಮೀಕ್ಷೆಯಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಬಿ.ಸಿ.ಎ. ಓದುತ್ತಿರುವ ೨೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಒಲ್ಡ್ ಸಿಟಿ, ಫೈಜಪುರ, ಶಹಾಪುರ ಗೇಟ್, ರಾಜಗೊಂಡ ಕಾಲೊನಿ ಹಾಗೂ ಗುಂಪಾ ಪ್ರದೇಶದ ಒಟ್ಟು ೮೨೫ ಮನೆಗಳಿಗೆ ಭೇಟಿ ಕೊಟ್ಟು ಪಾಲಕರ ಅಭಿಪ್ರಾಯ ಸಂಗ್ರಹಿಸಿದ್ದರು ಎಂದು ತಿಳಿಸಿದರು.
ಸಮೀಕ್ಷೆ ವೇಳೆ ಮೂರು ವಿಷಯಗಳ ತಲಾ ೨೦ ಪ್ರಶ್ನೆಗಳನ್ನು ಕೇಳಿ, ಅವರ ಅಭಿಪ್ರಾಯ ದಾಖಲಿಸಿಕೊಂಡಿದ್ದರು. ಯಾರೊಬ್ಬರ ವ್ಯಯಕ್ತಿಕ ಮಾಹಿತಿ ಅಥವಾ ಮೊಬೈಲ್ ಸಂಖ್ಯೆ ಪಡೆದಿಲ್ಲ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಶೇ.೬೫ ರಷ್ಟು ಪಾಲಕರು ೧೬ ವರ್ಷದ ಒಳಗಿನ ಮಕ್ಕಳು ಮೊಬೈಲ್ ಅನ್ನು ಶಿಕ್ಷಣೇತರ ಉದ್ದೇಶಕ್ಕೆ ಬಳಸುತ್ತಿದ್ದಾರೆ ಗೇಮ್, ಯುಟ್ಯೂಬ್ ರೀಲ್ಸ್ ಹಾಗೂ ಫೇಸ್‌ಬುಕ್ ವೀಕ್ಷಣೆ ಉಪಯೋಗಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಶೇ ೪೮ ರಷ್ಟು ಪಾಲಕರು ಮೊಬೈಲ್ ಬಳಕೆಯ ಕಾರಣಕ್ಕಾಗಿ ಮಕ್ಕಳು ದೈಹಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು, ಶೇ ೪೨ ರಷ್ಟು ಮಂದಿ ಕಣ್ಣು ನೋವು, ತಲೆ ನೋವು, ನಿದ್ರಾ ಹೀನತೆ ಸೇರಿದಂತೆ ಮಕ್ಕಳ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದ ಅವರು, ಶೇ ೩೩ ರಷ್ಟು ಪಾಲಕರು ಮಕ್ಕಳು ವಾಲಕರೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ ಮಾತನಾಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಗೊತ್ತಿದೆ ಎಂದು ಶೇ ೯೫ ರಷ್ಟು ಮಂದಿ, ಸ್ವಚ್ಛತೆ ತಮ್ಮ ವೈಯಕ್ತಿಕ ಜವಾಬ್ದಾರಿ ಎನ್ನುವುದು ತಿಳಿದಿದೆ ಎಂದು ಶೇ ೯೦ ರಷ್ಟು ಜನ ಹೇಳಿದ್ದಾರೆ. ಸ್ವಚ್ಛ ಭಾರತ ಮೊಬೈಲ್ ಆ್ಯಪ್ ಬಗ್ಗೆ, ಶೇ ೬೦ ರಷ್ಟು ಮಂದಿಗೆ ಗೊತ್ತಿದ್ದರೂ, ಶೇ ೧೦ ರಷ್ಟು ಮಂದಿಯಷ್ಟೇ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಡೌನ್ಲೋಡ್ ಮಾಡಿಕೊಂಡವರಲ್ಲಿ ಶೇ ೨೦ ರಷ್ಟು ಮಂದಿ ಮಾತ್ರ ಸಂತೃಪ್ತರಾಗಿದ್ದಾರೆ ಎಂದು ತಿಳಿಸಿದರು.
ಶೇ ೩೫ ರಷ್ಟು ಮಂದಿ ಒಣ ಕಸ, ಹಸಿ ಕಸ ವಿಂಗಡಿಸಿ ಕೊಡುತ್ತಿಲ್ಲವೆಂದು, ಶೇ ೨೨ ರಷ್ಟು ಜನ ನಗರಸಭೆಯವರು ಮನೆ ಮನೆ ಮನೆಗೆ ಬಂದು ಕಸ ಸಂಗ್ರಹಿಸುತ್ತಿದ್ದಾರೆAದು, ಶೇ ೫೮ ರಷ್ಟು ಮಂದಿ ಕೆಲವೊಮ್ಮೆ ಬರುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಇನ್ನು ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಕುರಿತ ಸಮೀಕ್ಷೆಯಲ್ಲಿ ಶೇ ೨೦.೯೦ ರಮ್ಮ ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಶೇ ೬೮ ೪೦ ರಷ್ಟು ಮಂದಿ ಕಾನೂನು ತಿಳಿವಳಿಕೆ ಇದೆ. ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿಯೂ ಇದೆ. ಆದರೆ, ಕಾನೂನು ಅರಿವು ಸಿಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಜನರ ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಅದನ್ನು ಆಡಳಿತದ ಮುಂದೆ ಇಡುವುದು ವಿದ್ಯಾರ್ಥಿಗಳ ಸಮೀಕ್ಷೆಯ ಉದ್ದೇಶವಾಗಿತ್ತು. ಸಮೀಕ್ಷೆಯ ಆಧಾರದ ಮೇಲೆ ಆಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದೇ ವಿದ್ಯಾರ್ಥಿಗಳ ಆಶಯವಾಗಿದೆ ಎಂದು ಅಫ್ರಾನಾಜ್ ಹೇಳಿದರು.
ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಅಭಿಲಾಸ ಪೋಲದಾಸ್, ಡಾ.ಸಿರಾಜುಲ್ ಹಸನ್, ಪ್ರೊ.ಮಹಮ್ಮದ್ ಇಕ್ಲಾಕ್, ಪ್ರೊ.ಬಿಲಾಲ್ ಅಹಮ್ಮದ್, ಪ್ರೊ.ಅಶ್ವಿನಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!