ಬೀದರ್: ಕಾರ್ಯನಿರತ ಪತ್ರಕರ್ತರ ೪೦ನೇ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಸಮ್ಮೇಳನದ ವೆಬ್ ಸೈಟ್” ಉದ್ಘಾಟಿಸಿ ಮಾತನಾಡಿದರು.
ಇಂದು ಅಭಿವೃದ್ಧಿ ಪತ್ರಿಕೋದ್ಯಮ ಪಕ್ಕಕ್ಕೆ ಸರಿದು ಹೇಳಿಕೆ ಆಧಾರಿತ ಪತ್ರಿಕೋದ್ಯಮವೇ ಪ್ರಧಾನ ಆಗುತ್ತಿರುವುದು ಆರೋಗ್ಯಕರ ಸಂಗತಿ ಅಲ್ಲ. ಹೀಗಾಗಿ ಕಾರ್ಯನಿರತ ಪತ್ರಕರ್ತರ ೪೦ನೇ ಸಮ್ಮೇಳನ ಮಾಧ್ಯಮ ಜಗತ್ತಿನ “ಚಿಂತನ-ಮAಥನ” ದ ವೇದಿಕೆಯಾಗಬೇಕು ಎಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಮ್ಮೇಳನಗಳು ಒಂದು ಅರ್ಥದಲ್ಲಿ “ಪಿಟ್ ಸ್ಟಾಪ್ಸ್” ಎಂದು ಹೇಳಬಹುದು.
ರೇಸಿಂಗ್ ಕಾರುಗಳು ತಮ್ಮ ಓಟದ ನಡುವೆ ಟೈರ್ ಗಳನ್ನು ಬದಲಾಯಿಸಲು, ಇಂಧನ ತುಂಬಿಸಿಕೊಳ್ಳಲು ಮಾರ್ಗ ಮಧ್ಯದಲ್ಲಿ ಇರುವ ನಿಲ್ದಾಣಗಳನ್ನು ಪಿಟ್ ಸ್ಟಾಪ್ಸ್ ಎಂದು ಕರೆಯುತ್ತಾರೆ. ವೈರಲ್ ಸುದ್ದಿಗಳ ವೇಗದಲ್ಲಿ ಓಡುತ್ತಿರುವ ಉದ್ಯಮಕ್ಕೆ ಈಗ ಇಂಥಾ ಪಿಟ್ ಸ್ಟಾಪ್ಸ್ ಗಳ ಅಗತ್ಯ ತುಂಬ ಇದೆ ಎಂದು ವಿವರಿಸಿದರು.
ಈ ಸಮ್ಮೇಳನ ವೃತ್ತಿಪರರಿಗೆ ತಮ್ಮ ನೋಟಗಳನ್ನು, ಆಯ್ಕೆಗಳನ್ನು ಮತ್ತು ವೃತ್ತಿಪರತೆಯನ್ನು ತೀಕ್ಷ್ಣಗೊಳಿಸಿಕೊಳ್ಳಲು ಮತ್ತು ಅವರ ಆಂತರಿಕ ದಿಕ್ಸೂಚಿಯನ್ನು ಮರು ಚಿಂತನಗೆ ಒಳಪಡಿಸಿಕೊಳ್ಳಲು ವೇದಿಕೆ ಒದಗಿಸುತ್ತದೆ ಎನ್ನುವ ಭರವಸೆ ಇದೆ ಎಂದು ಆಶಿಸಿದರು.
ಕೃತಕ ಬುದ್ದಿಮತ್ತೆ ತಂತ್ರಜ್ಞಾನ-ಚಾಲಿತ ಯುಗದಲ್ಲಿ ನಮ್ಮ ಕೌಶಲ್ಯಗಳನ್ನು ನವೀಕರಣಗೊಳಿಸಿಕೊಳ್ಳುವುದರ ಜೊತೆಗೆ
ಪತ್ರಿಕೋದ್ಯಮದ ಆದ್ಯತೆಗಳನ್ನೂ ಮರು ಪರಿಶೀಲನೆಗೆ ಚರ್ಚೆಗೆ ಒಳಪಡಿಸಬೇಕಿದೆ. ಇವತ್ತಿನ ತಾಂತ್ರಿಕ ವೇಗ ಮತ್ತು ಹೊಸ ಹೊಸ ತಂತ್ರಜ್ಞಾನದ ವೇಗದಲ್ಲಿ ಬಹುತೇಕ ಪ್ರತಿ ಐದು ವರ್ಷಗಳಿಗೆ ಒಮ್ಮೆ ನಾವು ಕಲ್ಪಿಸಕೊಳ್ಳಲಾಗದ ತಂತ್ರಜ್ಞಾನ ಹೊರಗೆ ಬರುತ್ತಿವೆ. ಹೊಸದಾಗಿ ಬಂದಿರುವ ಎಐ ತಂತ್ರಜ್ಞಾನದ ಸಾಧ್ಯತೆಗಳನ್ನು ಮತ್ತು ಅಪಾಯಗಳನ್ನು ನಾವು ಸರಿಯಾಗಿ ಗ್ರಹಿಸವ ಮೊದಲೇ ಹೊಸ ತಂತ್ರಜ್ಞಾನ ಬಂದಿರುತ್ತದೆ. ಈಗಾಗಲೇ ಎಐ ಕೂಡ ಹಳತಾಗಿ “ಸೂಪರ್ ಎಐ ಅಂತ ಬರುತ್ತಿದೆ ಎಂದು ಎಚ್ಚರಿಸಿದರು.
ಇವೆಲ್ಲವನ್ನೂ ಅರಿಯುವ ಮತ್ತು ಅಪಾಯಗಳನ್ನು ತಡೆಯುವ ಕಾರ್ಯಾಗಾರವಾಗಿ ಈ ಬಾರಿಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ ಎಂದರು.
ಡೀಪ್ಫೇಕ್ಗಳನ್ನು ಹೇಗೆ ಗುರುತಿಸುವುದು ಮತ್ತು ಸಾಮಾಜಿಕ ಮಾಧ್ಯಮ ಲೀಡ್ಗಳನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ನ್ಯುಜ್ ರೂಮ್ ಗಳು ಕಲಿಸಬೇಕಾಗಿದೆ ಎಂದರು.
ಮಾಧ್ಯಮ ಲೋಕದ ಕಾರ್ಪುರೇಟೀಕರಣದ ತಂದೊಡ್ಡಿರುವ ನೈತಿಕ ಸವಾಲುಗಳ ನಡುವೆಯೇ ಈಗ ಎಐ ಮತ್ತು ಆಧುನಿಕ ತಂತ್ರಜ್ಞಾನವೂ ಹೊಸ ಹೊಸ ನೈತಿಕ ಸವಾಲುಗಳನ್ನು ಮುಂದಿಟ್ಟಿದೆ. ಹೀಗಾಗಿ, ನೈತಿಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಗೆ ಸಮ್ಮೇಳನ ವೇದಿಕೆಯಾಗಲಿ ಎಂದು ನಾನು ಬಯಸುತ್ತೇನೆ ಎಂದರು.
ಈ ಬಜೆಟ್ ನಲ್ಲೂ ಬಂಪರ್
ಪತ್ರಕರ್ತ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನೆರಳಾಗಿ ನಿಂತಿದ್ದಾರೆ. ಈ ಬಾರಿಯ ಬಜೆಟ್ ನಲ್ಲೂ ಶ್ರಮಿಕ ಪತ್ರಕರ್ತ ಸಮುದಾಯಕ್ಕೆ ಉತ್ತವ Äಅನುಕೂಲಗಳು ಆಗುವ ಭರವಸೆ ಇದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮೇಳನದ ಕಚೇರಿ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಸಂಘದ ಉಪಾಧ್ಯಕ್ಷರಾದ ಹೆಚ್.ಬು ಮದನಗೌಡ, ಮತ್ತಿಕೆರೆ ಜಯರಾಮ, ಅಜ್ಜಮಾಡ ರಮೇಶ ಕುಟ್ಟಪ್ಪ, ಕಾರ್ಯದರ್ಶಿಗಳಾದ ಪುಂಢಲಿಕ ಬಾಳೊಜಿ, ಸೋಮಶೇಖರ ಕೆರೆಗುಡು, ಖಜಾಂಚಿ ವಾಸುದೇವ ಹೊಳ್ಳ, ಮಾಜಿ ಉಪಾಧ್ಯಕ್ಷ ವೇದಿಕೆಯಲ್ಲಿದ್ದರು. ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ ಠಾಕೂರ್, ಅಡಾಕ ಸಮಿತಿ ಸದಸ್ಯರಾದ ಶಿವಕುಮಾರ ಸ್ವಾಮಿ, ಅಪ್ಪಾರಾವ ಸೌದಿ, ಮಾಜಿ ಜಿಲ್ಲಾಧ್ಯಕ್ಷರಾದ ಗಂಧರ್ವ ಸೇನಾ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಕಾಮಶೆಟ್ಟಿ, ಅಶೋಕಕುಮಾರ ಕರಂಜಿ, ಡಿ.ಕೆ ಗಣಪತಿ, ದೀಪಕ ವಾಲಿ, ಡಾ.ರಜನೀಶ ವಾಲಿ ಹಾಗೂ ಇತರರಿದ್ದರು. ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಕಾರ್ಯಕ್ರಮ ನಿರೂಪಿಸಿ, ಪ್ರಥ್ವಿರಾಜ.ಎಸ್ ವಂದಿಸಿದರು.