1
1

ಬೀದರ್: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದಿನಾಳ ಗ್ರಾಮದ ದಲಿತ ಯುವ ಮುಖಂಡ ಭೂಮಾನಂದ ಅವರ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮೃತರ ಕುಟುಂಬಕ್ಕೆ ಕಾನೂನುಬದ್ಧ ರಕ್ಷಣೆ, ₹1 ಕೋಟಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಸಂಘಟನೆ ನಿರ್ಧರಿಸಿದ್ದು, ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹತ್ಯೆ, ಅತ್ಯಾಚಾರ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಹಲ್ಲೆ ಪ್ರಕರಣಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳನ್ನು ನೀಡಿದೆ. ಆದರೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಮತ್ತು ಹಲ್ಲೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಂಘಟನೆ ತಿಳಿಸಿದೆ.
ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿದ್ದು, ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಹದಿನಾಳ ಗ್ರಾಮದ ದಲಿತ ಯುವ ಮುಖಂಡ ಭೂಮಾನಂದ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಪ್ರಕರಣದ ಹಿಂದಿರುವ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸುವುದರ ಜೊತೆಗೆ, ಕುಟುಂಬದ ಜೀವನೋಪಾಯಕ್ಕಾಗಿ ಸರ್ಕಾರದಿಂದ ಸರ್ಕಾರಿ ನೌಕರಿ ನೀಡಬೇಕು ಹಾಗೂ ₹1 ಕೋಟಿ ಪರಿಹಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಸರ್ಕಾರ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬಾರದು. ಸಂವಿಧಾನಬದ್ಧ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣದ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರು ರವಿ ಕುಮಾರ ವಾಘಮಾರೆ,ದಲಿತ ಹಿರಿಯ ಹೋರಾಟಗಾರ ರಾಜಕುಮಾರ ಮೂಲಭಾರತಿ, ಜಿಲ್ಲಾ ಸಂಚಾಲಕರಾದ ಭರತ ಚಕ್ರವರ್ತಿ, ಕಂಟೆಪ್ಪ ಬಡಿಗೇರ, ಭಗವಂತರಾಜ ಸಾಗರ ಗಾದಗಿ, ಬಸವರಾಜ ಸಾಗರ, ರಾಜಕುಮಾರ ಡೊಂಗ್ರೆ, ರಾಮಚಂದ್ರ ಸುಡಗಾಡ ಸಿದ್ದ, ಜಿಲ್ಲಾ ವೈದ್ಯಕೀಯ ವಿಭಾಗದ ಸಂಚಾಲಕಿ ಡಾ. ಸುವಿತ ಎಸ್. ಮೋರೆ, ಬೀದರ್ ತಾಲೂಕು ಸಂಚಾಲಕ ಮಾರುತಿ ನಾಯಕ ಹಾಗೂ ಸುಧಾಕರ ದೊಡ್ಡಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Subscribe to get the latest posts sent to your email.