Popular Posts

ಬೀದರ–ನಾಂದೇಡ್ ರೈಲು ಮಾರ್ಗ ಯೋಜನೆ ತ್ವರಿತಗೊಳಿಸಲು ಪ್ರಭು ಚವ್ಹಾಣ ಒತ್ತಾಯ

ಬೀದರ–ನಾಂದೇಡ್ ವಾಯಾ ಔರಾದ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ತ್ವರಿತಗೊಳಿಸುವುದು, ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಸಂಚರಿಸುವ ಎಲ್ಲ ರೈಲುಗಳ ನಿಲುಗಡೆ ಹಾಗೂ ಕಮಲನಗರ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರಿಗೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸೋಮನಾಥ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿಯ ಶಾಸಕರು ಹಾಗೂ ಪಕ್ಷದ ಮುಖಂಡರ ನಿಯೋಗದೊಂದಿಗೆ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ನಿಯೋಗದ ಮನವಿಗಳಿಗೆ ಸ್ಪಂದಿಸಿದ ಸಚಿವರು ಅಧಿಕಾರಿಗಳ ಸಭೆ ನಡೆಸಿ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು‌. ಈ ವೇಳೆ ಶಾಸಕ ಪ್ರಭು ಬಿ.ಚವ್ಹಾಣ ಅವರು ಮಾತನಾಡಿ, ಔರಾದ(ಬಿ) ತಾಲ್ಲೂಕು ಕೇಂದ್ರಕ್ಕೆ ಇದುವರೆಗೆ ರೈಲ್ವೆ ಸಂಪರ್ಕ ಇಲ್ಲ. ಹೀಗಾಗಿ ಕ್ಷೇತ್ರದ ಜನತೆ ಬೀದರ, ಉದಗೀರ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಬಹುದಿನಗಳ ಬೇಡಿಕೆಯಾದ ಬೀದರ–ನಾಂದೇಡ್ ವಾಯಾ ಔರಾದ ನೂತನ ರೈಲ್ವೆ ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. ಕಾಮಗಾರಿ ಶೀಘ್ರ ಆರಂಭಿಸುವಂತೆ ಅನೇಕ ಸಲ ಮನವಿ ಸಲ್ಲಿಸಿದ್ದೇನೆ. ಇನ್ನು ವಿಳಂಬ ಆಗುವುದು ಬೇಡ ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯವು ತನ್ನ ವ್ಯಾಪ್ತಿಯ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಹಾಗೂ ಭೂಮಿಯನ್ನು ಒದಗಿಸಲು ಮುಂದಾಗಿದೆ‌. ಡಿಪಿಆರ್ ಆಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಿದಲ್ಲಿ ಯೋಜನೆ ಆರಂಭಿಸಬಹುದು ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಮಹತ್ವದ ಯೋಜನೆಗೆ ತಾವು ಮಧ್ಯಸ್ಥಿಕೆ ವಹಿಸಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಶೀಘ್ರ ಆರಂಭವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಇದೇ ವೇಳೆ ಕಮಲನಗರ ತಾಲ್ಲೂಕಿನಲ್ಲಿ ರೈಲ್ವೆ ನಿಲ್ದಾಣವಿದ್ದರೂ, ಅಲ್ಲಿ ಸಂಚರಿಸುವ ಎಲ್ಲ ರೈಲುಗಳು ನಿಲುಗಡೆ ನೀಡದಿರುವುದರಿಂದ ಸಾರ್ವಜನಿಕರಿಗೆ ರೈಲ್ವೆ ಸಂಪರ್ಕದ ಸಂಪೂರ್ಣ ಪ್ರಯೋಜನ ದೊರೆಯುತ್ತಿಲ್ಲ. ದೂರದ ನಿಲ್ದಾಣಗಳಿಗೆ ತೆರಳಿ ರೈಲು ಹತ್ತಬೇಕಾದ ಅನಿವಾರ್ಯತೆ ಸಾರ್ವಜನಿಕರಿಗೆ ಎದುರಾಗಿದೆ. ಆದ್ದರಿಂದ ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಮಲನಗರ ಪಟ್ಟಣದ ಮುಖ್ಯ ರಸ್ತೆಯ ಮೂಲಕ ರೈಲ್ವೆ ಹಳಿ ಹಾದು ಹೋಗಿದ್ದು, ರೈಲ್ವೆ ಕ್ರಾಸಿಂಗ್‌ನಲ್ಲಿ ಪದೇಪದೇ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗುತ್ತಿವೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಅಂಡರ್ ಗ್ರೌಂಡ್ ಬ್ರಿಜ್ ನಿರ್ಮಿಸಿ ಅನಾಹುತಗಳನ್ನು ಶಾಶ್ವತವಾಗಿ ತಪ್ಪಿಸಬೇಕು ಎಂದು ಸಚಿವರ ಗಮನ ಸೆಳೆದರು.
ಬೀದರನ ಹಳೆ ಆದರ್ಶ್ ಕಾಲೋನಿ ಹಾಗೂ ಶಹಾಪೂರ ಗೇಟ್ ಹತ್ತಿರದ ರೈಲ್ವೇ ಕ್ರಾಸಿಂಗ್ ನಲ್ಲಿ ಅಂಡರ್ ಗ್ರೌಂಡ್ ಬ್ರಿಜ್ ಕಾಮಗಾರಿಗಳ ಡಿಪಿಆರ್ ಆಗಿದೆ. ಸ್ಥಳ ಪರಿಶೀಲನೆ ಕೂಡ ಆಗಿದೆ. ಕಾಮಗಾರಿ ಬೇಗ ಆರಂಭಿಸಿ ಜನತೆಗೆ ಅನುಕೂಲ ಮಾಡಿಕೊಡುವಂತೆ ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮನವಿ ಸಲ್ಲಿಸಿದರು.
ಔರಾದ(ಬಿ) ಸೇರಿದಂತೆ ಬೀದರ ಜಿಲ್ಲೆಯಲ್ಲಿ ರೈಲ್ವೆ ಹಾಗೂ ಜಲಶಕ್ತಿ ಇಲಾಖೆಗೆ ಸಂಬಂಧಿಸಿದ ಅಗತ್ಯ ಅಭಿವೃದ್ಧಿ ಕಾಮಗಾರಿಗಳು, ಕ್ಷೇತ್ರದ ಜನರ ಪ್ರಮುಖ ಬೇಡಿಕೆಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಎಲ್ಲರ ಮನವಿಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ ಶಾಸಕ ಸಿದ್ದು ಪಾಟೀಲ್, ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬೀದರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ, ಪೀರಪ್ಪ ಯರನಳ್ಳಿ, ಪಕ್ಷದ ಮುಖಂಡರಾದ ಬಾಬು ವಾಲಿ, ಈಶ್ವರ್ ಸಿಂಗ್ ಠಾಕೂರ್, ಬಸವರಾಜ ಆರ್ಯ, ಬಾಬುರಾವ ಕಾರಬಾರಿ ಉಪಸ್ಥಿತರಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading