ಬೀದರ್ ತಾಲ್ಲೂಕಿನ ಹಳೆಯ ಆದರ್ಶ ಕಾಲೋನಿ ಬಳಿಯ ರೈಲ್ವೆ ಗೇಟ್ ಬಳಿ ಕೆಳಸೇತುವೆ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಪೂರ ಗೇಟ್ ಬಳಿ ಮೇಲ್ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿಪಿಆರ್ ಹಂತದ ಪ್ರಕ್ರಿಯೆ ನಡೆಯುತ್ತಿದ್ದು, ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ ಮಲ್ಕಾಪುರೆ ಅವರು ಕೇಂದ್ರ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಮತ್ತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದರು.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಮತ್ತು ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಬೀದರ್ ಬಿಜೆಪಿ ನಿಯೋಗದ ಸಭೆಯಲ್ಲಿ ಸಂದರ್ಭದಲ್ಲಿ ಎರಡೂ ಪ್ರಮುಖ ಸೇತುವೆ ಕಾಮಗಾರಿಗಳ ಕುರಿತು ವಿವರವಾಗಿ ಮನವರಿಕೆ ಮಾಡಿಕೊಡಲಾಯಿತು. ಡಿಪಿಆರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಅಗತ್ಯ ಅನುಮೋದನೆ ಹಾಗೂ ಅನುದಾನ ಒದಗಿಸುವ ಮೂಲಕ ಕಾಮಗಾರಿಗಳಿಗೆ ತ್ವರಿತವಾಗಿ ಚಾಲನೆ ನೀಡುವಂತೆ ಮನವಿ ಸಲ್ಲಿಸಲಾಯಿತು.
ಹಳೆಯ ಆದರ್ಶ ಕಾಲೋನಿ ಹಾಗೂ ಶಾಪೂರ ಗೇಟ್ ಪ್ರದೇಶಗಳಲ್ಲಿ ರೈಲ್ವೆ ಗೇಟ್ನಿಂದಾಗಿ ಪ್ರತಿನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮೇಲ್ ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಗೊಂಡಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವುದರ ಜೊತೆಗೆ, ಸಾರ್ವಜನಿಕರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಪ್ರಯಾಣಿಕರ ಸಮಯ ಉಳಿತಾಯವಾಗುವುದರೊಂದಿಗೆ ರೈಲ್ವೆ ಗೇಟ್ಗಳ ಬಳಿ ಸಂಭವಿಸಬಹುದಾದ ಅಪಘಾತಗಳ ಸಾಧ್ಯತೆಯನ್ನೂ ಕಡಿಮೆ ಮಾಡಲು ಈ ಕಾಮಗಾರಿಗಳು ಸಹಕಾರಿಯಾಗಲಿವೆ.
ಇದೇ ಸಂದರ್ಭದಲ್ಲಿ ಕಲಬುರಗಿವರೆಗೆ ಲಭ್ಯವಿರುವ ವಂದೇ ಭಾರತ್ ರೈಲನ್ನು ಬೀದರ್ವರೆಗೆ ವಿಸ್ತರಿಸಬೇಕು ಹಾಗೂ ಬೀದರ್–ಬೆಂಗಳೂರು ರೈಲನ್ನು ಕಲಬುರಗಿ ಮಾರ್ಗವಾಗಿ ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನೂ ಸಚಿವರ ಮುಂದಿಡಲಾಯಿತು.
ಬೀದರ್ ಜಿಲ್ಲೆಯ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು, ಪ್ರಯಾಣಿಕರಿಗೆ ವೇಗದ ಹಾಗೂ ಅನುಕೂಲಕರ ರೈಲು ಸೇವೆ ಕಲ್ಪಿಸುವುದು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ರೈಲ್ವೆ ಮೂಲಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಬೇಡಿಕೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಮನವಿಗೆ ಸಚಿವ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜನರ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯ ಮೂಲಕ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಬಿವೈ ರಾಘವೇಂದ್ರ,ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ್ ಪಾಟೀಲ್, ಶಾಸಕರಾದ ಶ್ರೀ ಪ್ರಭು ಬಿ. ಚವ್ಹಾಣ್, ಶ್ರೀ ಶರಣು ಸಲಗರ, ಶ್ರೀ ಸಿದ್ದು ಪಾಟೀಲ್, ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ, ಬೀದರ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪೀರಪ್ಪ ಯರನಳ್ಳಿ, ಶ್ರೀ ಕಿರಣ್ ಪಾಟೀಲ್ ಹಾಗೂ ಪಕ್ಷದ ಮುಖಂಡರಾದ ಶ್ರೀ ಬಾಬು ವಾಲಿ, ಶ್ರೀ ಬಾಬುರಾವ್ ಕಾರಬಾರಿ, ಶ್ರೀ ಬಸವರಾಜ ಆರ್ಯ, ಶ್ರೀ ಈಶ್ವರ್ ಸಿಂಗ್ ಠಾಕೂರ್ ಉಪಸ್ಥಿತರಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.