1
1

ಬೀದರ್: ಉರಿಲಿಂಗ ಪೆದ್ದಿ ಕಳ್ಳತನ ವೃತ್ತಿ ಬಿಟ್ಟು ಮಹಾನ್ ಶರಣನಾಗಿದ್ದ ಎಂದು ಚಿಂತಕ ದಿನೇಶ್ ಕೊಂಡ ಹಳ್ಳಿಖೇಡ ಹೇಳಿದರು.
ವಚನಾಮೃತ ಕನ್ನಡ ಸಂಘದ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಶ್ರೀ ಕೃಷ್ಣ ದರ್ಶಿನಿ ಉಡುಪಿ ಹೋಟೆಲ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಯೋಗಿ ಜೇಡರ ದಾಸಿಮಯ್ಯ ಹಾಗೂ ಶರಣ ಉರಿಲಿಂಗ ಪೆದ್ದಿ ವಿಚಾರ ಸಂಕಿರಣದಲ್ಲಿ ಅವರು ಉರಿಲಿಂಗ ಪೆದ್ದಿ ಕುರಿತು ಉಪನ್ಯಾಸ ನೀಡಿದರು.
ಉರಿಲಿಂಗ ಪೆದ್ದಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಒಮ್ಮೆ ಶ್ರೀಮಂತರೊಬ್ಬರ ಮನೆ ಮಹಡಿ ಏರಿ ಬೆಳಕಿಂಡಿಯಿಂದ ಒಳಗೆ ನೋಡಿದ್ದ. ಒಳಗೆ ಉರಿಲಿಂಗ ದೇವರು ದೀಕ್ಷೆ ನೀಡುತ್ತಿದ್ದುದ್ದನ್ನು ಕಂಡು ಕಳ್ಳತನ ವೃತ್ತಿ ತೊರೆದಿದ್ದ. ಗುರುಗಳ ಸೇವೆ ಮಾಡಿದ್ದ ಎಂದು ತಿಳಿಸಿದರು.
ಜೇಡರ ದಾಸಿಮಯ್ಯ ಸತ್ಯ ಶುದ್ಧ ಕಾಯಕ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದರು ಎಂದು ಜೇಡರ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದ ಶೈಲಜಾ ಹುಡಗೆ ಹೇಳಿದರು.
ದಾಸಿಮಯ್ಯನವರ ವಿಚಾರಧಾರೆಗೆ ತಲೆ ಬಾಗಿ ಮಹಾರಾಣಿಯೊಬ್ಬರು ಜೈನ ಧರ್ಮಕ್ಕೆ ತಿಲಾಂಜಲಿ ಹೇಳಿ ಶಿವ ಧರ್ಮ ಸ್ವೀಕರಿಸಿದ್ದರು ಎಂದು ತಿಳಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ, ಆರ್ಥಿಕ, ಲಿಂಗ ಸಮಾನತೆ ತಳಹದಿ ಮೇಲೆ ಸದೃಢ ಸಮಾಜ ಕಟ್ಟಲು ಶ್ರಮಿಸಿದ್ದರು ಎಂದು ಉದ್ಘಾಟನೆ ನೆರವೇರಿಸಿದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಸವಿತಾ ಪಾಟೀಲ ಹೇಳಿದರು.
ಮನುಷ್ಯ ಆಡಂಬರ ಜೀವನ ಬಿಡಬೇಕು. ದೇಹ ದಂಡಿಸಿ ದುಡಿದು ಉಣ್ಣಬೇಕು ಎಂದು ತಿಳಿಸಿದರು.
ಸಂಘದಿಂದ ವಚನ ಸಾಹಿತ್ಯ ಮನೆ ಮನೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆದಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ರೇಣುಕಾ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯ ಅಶೋಕ್ ಬೂದಿಹಾಳ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾವತಿ ಹಿರೇಮಠ ಉಪಸ್ಥಿತರಿದ್ದರು. ಶ್ರೀಕಾಂತ ಬಿರಾದಾರ ಹಾಗೂ ಶಂಭುಲಿಂಗ ವಾಲ್ದೊಡ್ಡಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಪ್ರವೀಣ್ ನಾಡಗೀತೆ ಹಾಡಿದರು. ಬಸವರಾಜ ಬಿರಾದಾರ ನಿರೂಪಿಸಿದರು. ಶ್ರೀದೇವಿ ಸೋಮಶೆಟ್ಟಿ ಸ್ವಾಗತಿಸಿದರು. ಪದ್ಮರಾಜ ಅಜೀತಮಣಿ ವಂದಿಸಿದರು.
Subscribe to get the latest posts sent to your email.