1
1

ಬೀದರ, ಆ.14: ಕುಂಬರವಾಡದ ಸರ್ವೇ ನಂ. 51/1ರಲ್ಲಿರುವ 75 ಹಾಗೂ 80 ಅಡಿ ವಿಸ್ತೀರ್ಣದ ಜಾಗವನ್ನು ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕು ಹಾಗೂ ಬೀದರ ಮಹಾನಗರ ಪಾಲಿಕೆಯ ಡಿಮ್ಯಾಂಡ್ ರಿಜಿಸ್ಟರ್ನಲ್ಲಿ ಸದರಿ ಜಾಗವನ್ನು ಸಮುದಾಯ ಭವನಕ್ಕಾಗಿ ಕಾಯ್ದಿರಿಸಿರುವುದಾಗಿ ನಮೂದಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕುಂಬರವಾಡ ಎಸ್ಸಿ ಹೊಲೆಯ ಸಮುದಾಯದ ಜನರು, ಶುದ್ಧೋಧನ ಮಹಾಮಾಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ವಿವಿಧ ದಲಿತ, ಕನ್ನಡಪರ, ಕಾರ್ಮಿಕ, ಮಹಿಳಾ ಮತ್ತು ಧಾರ್ಮಿಕ ಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಯಿತು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಬೀದರ ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಂಬರವಾಡದಲ್ಲಿ ಬಹುತೇಕ ಪರಿಶಿಷ್ಟ ಜಾತಿಯ ಕುಟುಂಬಗಳು ಕೃಷಿ, ಕೂಲಿ ಹಾಗೂ ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರುವುದರಿAದ ಸಭೆ, ಸಮಾರಂಭ, ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಸ್ಥಳದ ಕೊರತೆಯಿದೆ. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣವಾದರೆ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸರ್ವೇ ನಂ. 51/1ರಲ್ಲಿನ ಜಾಗವನ್ನು ಸಮುದಾಯ ಭವನಕ್ಕಾಗಿ ಮಂಜೂರು ಮಾಡುವಂತೆ ಮೇ 18, 2026ರಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಈ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ರಮಾಬಾಯಿ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆ, ವಿಜಯದಶಮಿ ಸೇರಿದಂತೆ ವಿವಿಧ ಸಭೆ, ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಜೂನ್ 12ರಂದು ಧರಣಿ ನಡೆಸಿ ಸ್ಥಳೀಯ ನಗರಸಭೆ ಸದಸ್ಯ ಪ್ರಭುಶೆಟ್ಟಿ ಹಾಗೂ ಬೀದರ ಮಹಾನಗರ ಪಾಲಿಕೆಯ ಝೋನಲ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿತ್ತು ಎಂದು ಸಂಘಟಕರು ಹೇಳಿದ್ದಾರೆ.
ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ನಗರಾಭಿವೃದ್ಧಿ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಕಂದಾಯ ಇಲಾಖೆಯ ಭೂ ಮಂಜೂರಾತಿ ವಿಭಾಗದ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳಿಗೆ ಜಾಗ ಮಂಜೂರಾತಿ ಕುರಿತು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಾಗವನ್ನು ಶೀಘ್ರ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದಲ್ಲದೆ, ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ₹1 ಕೋಟಿ ಅನುದಾನ ಮಂಜೂರು ಮಾಡಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.
ಧರಣಿ ಸ್ಥಳಕ್ಕೆ ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ತಹಸೀಲ್ದಾರ್ ರವೀಂದ್ರ ದಾಮ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಕುಂಬರವಾಡ ಸರ್ವೇ ನಂ. 51/1ರಲ್ಲಿನ 75 ಹಾಗೂ 80 ಅಡಿ ವಿಸ್ತೀರ್ಣದ ಜಾಗವನ್ನು 15 ದಿನಗಳೊಳಗೆ ಮಂಜೂರು ಮಾಡಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಧರಣಿಯಲ್ಲಿ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಕಡೆಮನಿ, ಉಪಾಧ್ಯಕ್ಷೆ ನಿಲ್ಲಮ್ಮ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಖಜಾಂಚಿ ಸಿದ್ದಪ್ಪ ಕಾಂಬಳೆ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಮುದಾಯದ ಜನರು ಭಾಗವಹಿಸಿದ್ದರು.
Subscribe to get the latest posts sent to your email.