ಬೀದರ, ಆಗಸ್ಟ್ 19 (ಕಕ ವಾರ್ತೆ) : ಬೀದರ ಅರಣ್ಯ ವಿಭಾಗದ ವ್ಯಾಪ್ತಿಯ ಹೊನ್ನಿಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಹತ್ತಿರ ಇರುವ ಚೊಂಡಿ-ಮಮದಾಪುರ ಹುಲ್ಲುಗಾವಲು ಕೃಷ್ಣಮೃಗಗಳ (Antilope cervicapra)ಆವಾಸ ಸ್ಥಾನದಲ್ಲಿ, 2026ರ ಆಗಸ್ಟ್ 17 ರಂದು ವನ್ಯಜೀವಿಯಾದ ಕೃಷ್ಣಮೃಗವನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಆರು ಜನರನ್ನು ಬಂಧಿಸಿಲಾಗಿದೆ ಎಂದು ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ್ ಸುಭಾಷರಾವ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ತಾಲೂಕಿನ ಜೊಂಡಿ ತಾಂಡಾ ಹಾಗೂ ಮಮದಾಪುರ ತಾಂಡಾದ ಗ್ರಾಮಸ್ಥರು ಮೂವರು ಆರೋಪಿಗಳನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಆರೋಪಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಪರಾರಿಯಾದ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆಯಿಂದ ವಿಶೇಷ ಹುಡುಕಾಟ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನ ಹಾಗೂ ಕಲಬುರಗಿ ಜಿಲ್ಲೆಯ ಪೊಲೀಸರು ಹಾಗೂ ಕಲಬುರಗಿ ವಿಭಾಗದ ಅರಣ್ಯ ಅಧಿಕಾರಿಗಳ ಸಹಕಾರದ ಜೊತೆಗೆ ತೆಲಂಗಾಣ ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ 2026ರ ಆಗಸ್ಟ್ 18 ರಂದು ಬಸವಕಲ್ಯಾಣ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್ ಅವರ ನೇತೃತ್ವ ಹಾಗೂ ಬಸವಕಲ್ಯಾಣ ಆರ್.ಎಫ್.ಒ ಶಿವಕುಮಾರ ರಾಠೋಡ, ಹುಮನಾಬಾದ ಆರ್.ಎಫ್.ಒ ಪವನಕುಮಾರ ಧೂಳೆ, ಭಾಲ್ಕಿ ಡಿ.ಆರ್.ಎಫ್.ಒ. ಶಾಂತಕುಮಾರ ಅವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನೂ ಪತ್ತೆಹಚ್ಚಿ ಬಂಧಿಸಲಾಗಿದ್ದು, ಈ ಮೂಲಕ ಪ್ರಕರಣದಲ್ಲಿ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಎರಡು ನಾಲ್ಕು ಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ರೈಫಲ್ ಬಂದೂಕನ್ನು ಜಪ್ತಿ ಪಡಿಸಿ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ಮೇಲೆ (WLOR-02/2026-27) ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೃತ್ಯದಲ್ಲಿ ಕಲಬುರಗಿ ಜಿಲ್ಲೆಯ ಜಂಬಗಿ ತಾಲೂಕಿನ ಮೂವರು ಸ್ಥಳೀಯರು ಹಾಗೂ ಗಡಿ ರಾಜ್ಯ ತೆಲಂಗಾಣದ ಹೈದರಾಬಾದ್ ಮೂಲದ ಮೂವರು ವ್ಯಕ್ತಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಗಡಿ ರಾಜ್ಯವಾದ ತೆಲಂಗಾಣದ ಹೈದರಾಬಾದ್ ಮೂಲದ ಕೆಲವರು, ಅತ್ಯಾಧುನಿಕ ಲಾಂಗ್ ರೇಂಜ್ ರೈಫಲ್ಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಪ್ರಕರಣದ ಕುರಿತು ಅರಣ್ಯ ಇಲಾಖೆಯು ತುಂಬಾ ಗಂಭೀರವಾಗಿ ತೆಗೆದುಕೊಂಡು ಮುಂದಿನ ಕಾನೂನು ಕ್ರಮ ಕುರಿತು ಬೀದರ ಆರ್.ಎಫ್.ಒ. ಪ್ರವೀಣಕುಮಾರ ಇವರು ತನಿಖೆಯನ್ನು ಮುಂದುವರೆಸಿರುತ್ತರೆ.
ಕೃಷ್ಣಮೃಗವು (Antilope cervicapra)ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ, ಶೆಡ್ಯೂಲ್-1 ಸಂರಕ್ಷಿತ ವನ್ಯಜೀವಿಯಾಗಿದ್ದು, ಅದರ ಬೇಟೆ ಅಥವಾ ಹತ್ಯೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕರಣಗಳನ್ನು ಅರಣ್ಯ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಬೀದರ್ ತಾಲೂಕಿನ ಜೊಂಡಿ ಹಾಗೂ ಮಮದಾಪುರ ಗ್ರಾಮದ ತಾಂಡಾಗಳ ಸಾರ್ವಜನಿಕರು ತಮ್ಮ ಸಾಹಸ ಹಾಗೂ ಸಮಯಪ್ರಜ್ಞೆಯಿಂದ ವನ್ಯಜೀವಿ ಬೇಟೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಕಾರ್ಯವಾಗಿದೆ. ಈ ಮೂಲಕ ಬೀದರ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಇದೇ ರೀತಿ ಯಾವುದೇ ವನ್ಯಜೀವಿ ಬೇಟೆ, ಅಕ್ರಮ ಬೇಟೆ ಅಥವಾ ವನ್ಯಜೀವಿಗಳಿಗೆ ಸಂಬAಧಿಸಿದ ಕಾನೂನುಬಾಹಿರ ಚಟುವಟಿಕೆಗಳು ತಮ್ಮ ಗಮನಕ್ಕೆ ಬಂದಲ್ಲಿ, ಕೂಡಲೇ ಸಮೀಪದ ಅರಣ್ಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ದೊರೆಯುವ ಇಂತಹ ಮಾಹಿತಿಯನ್ನು ಆಧರಿಸಿ ಪ್ರಕರಣಗಳನ್ನು ತಕ್ಷಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ವನ್ಯಜೀವಿ ಸಂರಕ್ಷಣೆಗೆ ಸಹಕರಿಸುವಂತೆ ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ್ ಸುಭಾಷರಾವ್ ಪಾಟೀಲ್ ಅವರು ಕೋರಿದ್ದಾರೆ.
Discover more from ಕಲಿಯುಗದ ಕೂಗು
Subscribe to get the latest posts sent to your email.