1
1

ಬೀದರ, ಆಗಸ್ಟ್ 19 (ಕರ್ನಾಟಕ ವಾರ್ತೆ) : “ಕಾರಾಗೃಹದಲ್ಲಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು, ಉತ್ತಮ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು” ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ ಹೇಳಿದರು.
ಬೀದರ್ ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾರ್ಮೆಲ್ ಸೇವಾ ಟ್ರಸ್ಟ್ ಸಂಸ್ಥೆ, ಡಾನ್ ಬೋಸ್ಕೋ ಹಾಗೂ ಬೀದರ್ ಜಿಲ್ಲಾ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವೃತ್ತಿಪರ ಹಾಗೂ ಕೌಶಲ್ಯ ತರಬೇತಿ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕಾರಾಗೃಹದಿಂದ ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಅವಕಾಶ. ಸಾಮಾನ್ಯವಾಗಿ ಕಾರಾಗೃಹದ ಬಗ್ಗೆ ತಪ್ಪು ಕಲ್ಪನೆಗಳಿವೆ. ಕಾರಾಗೃಹ ಎಂದರೆ ಶಿಕ್ಷೆ, ನೋವು, ಕತ್ತಲೆ ಮತ್ತು ಜೀವನದ ಅಂತ್ಯ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಕಾರಾಗೃಹದ ಉದ್ದೇಶ ಕೇವಲ ಶಿಕ್ಷೆ ನೀಡುವುದಲ್ಲ; ವ್ಯಕ್ತಿಯ ಸುಧಾರಣೆ, ಪುನರ್ವಸತಿ ಕಲ್ಪಿಸುವುದು ಮತ್ತು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವುದಾಗಿದೆ. ಬಂದಿಗಳು ಬಿಡುಗಡೆಯಾದ ನಂತರ ಕೌಶಲ್ಯ ತರಬೇತಿಯ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ಜೀವಿಸಬೇಕು,” ಎಂದರು.
ಬೀದರ್ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ದತ್ತಾತ್ರೇಯ ಆರ್. ಮೇದಾ ಮಾತನಾಡಿ, “ಕಾರ್ಮೆಲ್ ಸೇವಾ ಟ್ರಸ್ಟ್, ಡಾನ್ ಬೋಸ್ಕೋ ಮತ್ತು ಜಿಲ್ಲಾ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಮಹಿಳಾ ಬಂದಿಗಳಿಗಾಗಿ 2 ತಿಂಗಳ ಹೊಲಿಗೆ ತರಬೇತಿ ಹಾಗೂ ಎಲೆಕ್ಟ್ರಿಕಲ್ ಫಿಟ್ಟಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆಯುತ್ತಿರುವ ಮತ್ತು ಈಗಾಗಲೇ ತರಬೇತಿ ಮುಗಿಸಿರುವ ಬಂದಿಗಳು ಇದರ ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಯಾವುದೇ ತೊಂದರೆಗಳಿದ್ದರೆ ನೇರವಾಗಿ ಅಧೀಕ್ಷಕರನ್ನು ಸಂಪರ್ಕಿಸಬಹುದು,” ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಕಾರ್ಮೆಲ್ ಸೇವಾ ಟ್ರಸ್ಟ್ನ ಘಟಕ ನಿರ್ದೇಶಕಿ ಸಿಷ್ಟರ್ ಮೇರಿ ರೀಟಾ ಮತ್ತು ಎಲೆಕ್ಟ್ರಿಕಲ್ ಫಿಟ್ಟಿಂಗ್ ತರಬೇತಿಯ ಪ್ರಾಚಾರ್ಯರಾದ ಫಾದರ್ ಮ್ಯಾಥ್ಯೂ ಅವರು ತರಬೇತಿ ಪಡೆದ ಬಂದಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಇದೇ ವೇಳೆ ಹೊಲಿಗೆ ತರಬೇತಿ ಪಡೆದ 6 ಜನ ಮಹಿಳಾ ಬಂದಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಜೈಲರ್ ವಿಜಯಲಕ್ಷ್ಮಿ ಮಾತನಾಡಿ, ಬಂದಿಗಳು ವೃತ್ತಿಪರ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹದ ವೈದ್ಯಾಧಿಕಾರಿ ಶರಣಯ್ಯ ಸ್ವಾಮಿ, ಕಾರಾಗೃಹದ ಇತರೆ ಸಿಬ್ಬಂದಿ ಹಾಗೂ ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಸುರೇಶ್ ಟಾಳೆ ಕಾರ್ಯಕ್ರಮ ನಿರೂಪಿಸಿದರು, ಜೈಲು ಸಹಾಯಕ ಆನಂದ್ ಮಿರಗಿ ವಂದಿಸಿದರು.
Subscribe to get the latest posts sent to your email.