ಬೀದರ್: ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ , ಮುಂಬೈ ವತಿಯಿಂದ ನವೆಂಬರ್–ಡಿಸೆಂಬರ್ 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಬೀದರ್ನ ಖ್ಯಾತ ಗಾಯಕಿ ಕು. ಶಿವಾನಿ ಶಿವದಾಸ ಸ್ವಾಮಿ ಅವರು ಒಟ್ಟು ಎಂಟು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಮಾತನಾಡಿದ ಕು.ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು,, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್ 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್ ಕೌರ್ ಸೌದಿ ಪ್ರಶಸ್ತಿ,, ದಿವಂಗತ ಪಂ. ದಿ.ವಿ. ಪಾಲುಸ್ಕರ್ ಪ್ರಶಸ್ತಿ,, ಸೌ. ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ,, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ,, ಹರಿಓಂ ಟ್ರಸ್ಟ್ (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್ ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿವಂಗತ ಸೌ. ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
“ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್–ಡಿಸೆಂಬರ್ ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ್ಯಾಂಕ್ ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ-ತಾಯಿ, ಕುಟುಂಬಸ್ಥರು ಹಾಗೂ ಬೀದರ್ನ ಜನರ ಸಹಕಾರವೇ ಇದಕ್ಕೆ ಕಾರಣ,” ಎಂದು ಶಿವಾನಿ ಹೇಳಿದರು.
ಶಿವಾನಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು: ರಾಮಕೃಷ್ಣನ್ ಸಾಳೆ
ಶಿವಾನಿ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯ ಸರ್ಕಾರಿ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ ನ ರಾಮಕೃಷ್ಣನ್ ಸಾಳೆ ಒತ್ತಾಯಿಸಿದರು. ಇಂತಹ ಪ್ರತಿಭೆಗಳನ್ನು ಬೆಳೆಸುವ ಮೂಲಕ ಬೀದರ್ ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಬಹುದು. ಶಿವಾನಿ ಅವರು ಇದೀಗ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸು ಮಾಡಲಿ: ರಾಜೇಂದ್ರ ಸಿಂಗ್ ಪವಾರ್
ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ.ರಾಜೇಂದ್ರ ಸಿಂಗ್ ಪವಾರ್ ಆಗ್ರಹಿಸಿದರು.
ಸಂಗೀತ ಕ್ಷೇತ್ರದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಮಾಜ ಶಿವಾನಿ ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.
ಮಗಳನ್ನು ನಾವು ಹೆತ್ತಿರಬಹುದು, ಆದರೆ ಬೆಳೆಸುತ್ತಿರುವುದು ಜನರು: ಶಿವದಾಸ ಸ್ವಾಮಿ
ಶಿವಾನಿ ಅವರ ತಂದೆ ಶಿವದಾಸ ಸ್ವಾಮಿ ಮಾತನಾಡಿ, “ಮಗಳಿಗೆ ನಾವು ಜನ್ಮ ನೀಡಿರಬಹುದು. ಆದರೆ ಆಕೆಯ ಪ್ರತಿಭೆಯನ್ನು ಬೆಳೆಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಇಡೀ ಸಮಾಜ. ಜನರು ನೀಡುತ್ತಿರುವ ಪ್ರೀತಿ ಮತ್ತು ಸಹಕಾರದಿಂದಲೇ ಶಿವಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಎಲ್ಲರೂ ಸಹಕರಿಸಿ, ಪ್ರೋತ್ಸಾಹಿಸಬೇಕು,” ಎಂದು ಮನವಿ ಮಾಡಿದರು.
ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿ ಹೊಂದಿರುವ ಶಿವಾನಿ, ತಮ್ಮ ಸಾಧನೆಯ ಮೂಲಕ ಬೀದರ್ ಜಿಲ್ಲೆಯ ಹೆಸರು ದೇಶದಾದ್ಯಂತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಆಶಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.