1
1

ಬೀದರ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ ಘಟನೆ ಖಂಡಿಸಿ ಬೀದರ್ನಲ್ಲಿ ಪ್ರಗತಿಪರ ನಾಗರಿಕರ ವೇದಿಕೆ ನೇತೃತ್ವದಲ್ಲಿ ಖಂಡನಾ ಸಮಾವೇಶ ನಡೆಯಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ ಆಯೋಜಿಸಿದ್ದ ಖಂಡನಾ ಸಮಾವೇಶದಲ್ಲಿ ಖರ್ಗೆ ಅವರಿಗೆ ಆಗಿರುವ ಅವಮಾನವನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್ ಅವರಿಗೆ ಸಲ್ಲಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ ಸ್ಥಳವನ್ನು ಜಾತಿವಾದಿಗಳಿಂದ, ಬಿಜೆಪಿ ಹಾಗೂ ಆರ್ಎಸ್ಎಸ್ನವರ ಕುಮ್ಮಕ್ಕಿನಿಂದ ಶುದ್ಧೀಕರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಕೃತ್ಯ ಮಾನವ ಸಮಾಜವೇ ತಲೆತಗ್ಗಿಸುವಂತಾಗಿದೆ. ಇದು ದೇಶದ ಜನತೆಗೆ ಹಾಗೂ ಸಂವಿಧಾನದ ಆಶಯಗಳಿಗೆ ಮಾಡಿರುವ ಅವಮಾನವಾಗಿದೆ. ಘಟನೆಯ ಸತ್ಯಾಸತ್ಯತೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರಗತಿಪರ ನಾಗರಿಕರ ವೇದಿಕೆ ಅಧ್ಯಕ್ಷ ಶಂಕರರಾವ್ ದೊಡ್ಡಿ ಮಾತನಾಡಿ, “ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರೂ ದೇಶದಲ್ಲಿ ಜಾತೀಯತೆ ಇನ್ನೂ ಜೀವಂತವಾಗಿರುವುದು ಇಂತಹ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಶುದ್ಧೀಕರಣದ ಹೆಸರಿನಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ವೇದಿಕೆಯ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಮಾತನಾಡಿ, “ಉತ್ತರಾಖಂಡದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ಶುದ್ಧೀಕರಣ’ದ ಹೆಸರಿನಲ್ಲಿ ಅವಮಾನ ಮಾಡಿರುವುದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಕೃತ್ಯಗಳು ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಆಶಯಗಳಿಗೆ ವಿರುದ್ಧವಾಗಿವೆ. ಸಂವಿಧಾನವನ್ನು ತಿರಸ್ಕರಿಸುವ ಮನೋಭಾವದ ವಿರುದ್ಧ ಪ್ರಜಾಪ್ರಭುತ್ವವಾದಿಗಳು ಒಗ್ಗೂಡಿ ಧ್ವನಿ ಎತ್ತಬೇಕಿದೆ” ಎಂದರು.
ಹಿರಿಯ ಹೋರಾಟಗಾರ ಬಾಬುರಾವ್ ಹೊನ್ನಾ ಮಾತನಾಡಿ, “ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದೆ. ದೇಶದ ಅನೇಕ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ಧೋರಣೆಗಳ ವಿರುದ್ಧ ಸಂವಿಧಾನಪರ ಶಕ್ತಿಗಳು ಒಗ್ಗೂಡಿ ಹೋರಾಟ ನಡೆಸಬೇಕು. ಕೋಮುವಾದಿ ಶಕ್ತಿಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಬೇಕು. ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಗಿರುವ ಅವಮಾನ ಖಂಡನೀಯ” ಎಂದು ಹೇಳಿದರು.
ವೇದಿಕೆಯ ಪ್ರಮುಖರಾದ ಡಾ.ಮಕ್ಸೂದ್ ಚಂದಾ, ಪಂಡಿತ, ಚಿದ್ರಿ, ಸಂಜಯ ಜಾಗೀರದಾರ್, ನಾರಾಯಣ ಗಣೇಶ, ಚಂದ್ರಶೇಖರ ಪಾಟೀಲ ಹೋಚಕನಳ್ಳಿ, ರಮೇಶ ಕಟ್ಟಿತುಗಾಂವ್, ಸುಭಾಷ ಲಾಧಾ ಸೇರಿದಂತೆ ಹಲವರು ಮಾತನಾಡಿ,”ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ ಕಾರಣಕ್ಕೆ ಆ ಸ್ಥಳವನ್ನು ‘ಅಪವಿತ್ರ’ವೆಂದು ಪರಿಗಣಿಸಿ ಶುದ್ಧೀಕರಣ ನಡೆಸಿದ್ದರೆ, ಅಂತಹ ನಡೆ ಭಾರತದ ಸಂವಿಧಾನದ ಸಮಾನತೆ, ಮಾನವ ಘನತೆ, ಸಹೋದರತ್ವ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಯ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಘಟನೆಗಳು ನಿಜವಾಗಿದ್ದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ರಾಜಕೀಯ ವಿರೋಧವನ್ನು ರಾಜಕೀಯವಾಗಿಯೇ ಎದುರಿಸಬೇಕು. ಯಾವುದೇ ವ್ಯಕ್ತಿಯ ಸಾಮಾಜಿಕ ಅಥವಾ ಜಾತಿ ಹಿನ್ನೆಲೆಯನ್ನು ಆಧರಿಸಿ ಅವಮಾನಿಸುವಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು. ಇಂತಹ ಘಟನೆಗಳು ಸಮಾಜದಲ್ಲಿ ವಿಭಜನೆ ಹಾಗೂ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಪ್ರಗತಿಪರ ನಾಗರಿಕರ ವೇದಿಕೆಯ ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಅಮೃತರಾವ ಚಿಮಕೋಡೆ, ಶಿವಮೂರ್ತಿ ಸುಭಾನೆ, ಬಸವರಾಜ ಕಾಂಬಳೆ, ಮಾರುತಿ ಶಾಖಾ, ಧನರಾಜ ಮುಸ್ತಾಪೂರೆ, ಜಗದೀಶ್ವರ ಬಿರಾದಾರ, ವಿಜಯನಗರ ಕ್ಯಾಥೋಲಿಕ ಚರ್ಚ್ ಪಾಸ್ಟರ್ ಫಾದರ್ ಸುನೀಲ್, ಮೆಥೋಡಿಸ್ಟ್ ಚರ್ಚ್ ಪಾಸ್ಟರ್ ಸ್ವಾಮಿದಾಸ, ಭಂತೆ ಸಂಗರಕ್ಷಿತ್, ಮೌಲ್ವಿ ನಿಝಾಮೋದ್ದೀನ್, ಚೌಂಡಿ ಮಠದ ಜಗದೀಶ್ವರ ಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
Subscribe to get the latest posts sent to your email.