ಬೀದರ್: ಈ ತಿಂಗಳ 19ರಂದು ಗುರುವಾರ ಹಿಂದವಿ ಸ್ವರಾಜ ಸ್ಥಾಪಕರು, ಈ ದೇಶ ಕಂಡ ಮಹಾನ ರಾಜರುಗಳ ಪೈಕಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜ ಅವರ 396ನೇ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಘುನಾಥರಾವ ಜಾಧವ ಹೇಳಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ಇತರ ಗಣ್ಯರು ಭಾಗವಹಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು 18 ಪಂಗಡ ಜಾತಿಗಳು, 12 ಬಲೂತೇದಾರರು, ಅಲ್ಪಸಂಖ್ಯಾತರು ಮತ್ತು ದಿನ-ದಲಿತರ ಮಹಾನ ರಾಜರಾಗಿದ್ದರು, ಅವರು ಎಲ್ಲಾ ಭಾರತೀಯರಿಗೆ ಸ್ಫೂರ್ತಿಯಾಗಿದ್ದರು. ಇಂತಹ ಮಹಾನ್ ಉತ್ಸವದಲ್ಲಿ ಎಲ್ಲರು ಭಾಗವಹಿಸಬೇಕಾಗಿ ಕೋರುವುದಾಗಿ ಪುನರೂಚ್ಛರಿಸಿದರು.
ನಮ್ಮ ರಾಜ್ಯದಲ್ಲಿ ಕೇವಲ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಲ್ಲದೆ ವಿಶ್ವಗುರು ಬಸವಣ್ಣನವರು, ರಕ್ತ ಕನಕದಾಸರು, ಮಹಾತ್ಮ ಜ್ಯೋತಿಬಾ ಫುಲೆ, ಸರ್ವಜ್ಞ, ಶ್ರೀ ಕೃಷ್ಣ ಜಯಂತಿ, ನಾರದ ಮಹರ್ಷಿಗಳ ಜಯಂತಿ, ನಾರಾಯಣ ಗುರುಗಳ ಜಯಂತಿ, ಭಗಿರಥ ಜಯಂತಿ ಸೇರಿದಂತೆ ಎಲ್ಲ ಮಹಾತ್ಮರ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಸೌಹಾರ್ದತೆಯ ರಾಜ್ಯ ನಮ್ಮದಾಗಿದೆ ಎಂದರು.
ಜಯಂತ್ಯೋತ್ಸವ ಸಮಿತಿಯ ಉಪಾಧ್ಯಕ್ಷರು ನ್ಯಾಯವಾದಿ ನಾರಾಯಣ ಗಣೇಶ ಮಾತನಾಡಿ, ಅಂದು ಬೆಳಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನಡೆಯುವುದು. ಬೆಳಗ್ಗೆ 10 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಚೌಕಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಪೂಜೆ ಮತ್ತು ಮಾಲಾರ್ಪಣೆ, ನಂತರ ಭವ್ಯ ಮೆರವಣಿಗೆ ನಡೆಯುವುದು. ಮೆರವಣಿಗೆಯು ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ಹರಳಯ್ಯ ವೃತ್ತ, ಮೋಹನ್ ಮಾರ್ಕೆಟ್, ರೋಟರಿ ಸರ್ಕಲ್ ಮೂಲಕ ಪೂಜ್ಯ ಡಾ ಚನ್ನಬಸವ ಪಟ್ಟದೇವರ ರಂಗಮಂದಿರ ತಲುಪುವುದು. ಮಧ್ಯಾಹ್ನ 12:30 ಗಂಟೆಗೆ ಡಾ ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಅರಣ್ಯ ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪೌರಾಡಳಿತ ಸಚಿವ ರಹೀಂ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸಾಗರ್ ಖಂಡ್ರೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಔರಾದ್ ಶಾಸಕ ಪ್ರಭು ಚವ್ಹಾಣ, ಬಸವಕಲ್ಯಾಣ ಶಾಸಕ ಶರಣು ಸಲಗರ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಹುಮ್ನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಶಶೀಲ.ಜಿ ನಮೋಶಿ, ಭೀಮರಾವ್ ಪಾಟೀಲ್, ಎಂ.ಜಿ ಮೂಳೆ, ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ, ಮಹಾನಗರ ಪಾಲಿಕೆ ಅಧ್ಯಕ್ಷ ಮೊಹಮ್ಮದ್ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಭಾಗವಹಿಸುವರು. ಪುಣೆಯ ಮರಾಠ ಸೇವಾ ಸಂಘದ ಇತಿಹಾಸಕಾರರಾದ ಗಂಗಾಧರ ಬನಬಾರೆ ಶಿವಾಜಿ ಮಹಾರಾಜರ ಜೀವನ ಹಾಗೂ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದವರು ತಿಳಿಸಿದರು. ಜಯಂತ್ಯೋತ್ಸವ ಸಮಿತಿಯ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಕಣಜಿ, ಕಾರ್ಯದರ್ಶಿ ಗೋವಿಂದರಾವ ಜಾಧವ, ಬಾಲಾಜಿ ಬಿರಾದಾರ, ಶಶಿಕಲಾ ಬಿರಾದಾರ, ಅನಿತಾ ಭಾರುಳೆ, ಉಷಾ ಸೂರ್ಯವಂಶಿ ಮಾತನಾಡಿದರು.
ಸಮಿತಿಯ ಪದಾಧಿಕಾರಿಗಳಾದ ರಂಜಿತ ಪಾಟೀಲ, ಸುರೇಶ ಟಾಕಳೆ, ಸದಾಶಿವ ಪಾಟೀಲ, ಕಿರಣ ಚವ್ಹಾಣ, ವಸಂತ ಬಿರಾದಾರ, ಸಂದೀಪ ಪಾಟೀಲ ಹಂಗರಗಾ, ರಂಗರಾವ ಪಾಟೀಲ, ಶಿವಾಜಿ ತಾಡಮಲ್ಲೆ, ಮೀನಾ ಜಾಧವ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.