Popular Posts

ಆಗಸ್ಟ್ 9ರಂದು ಸರ್ಕಾರಿ ರಜೆ ಘೋಷಿಸಬೇಕು: ರಾಜಗೊಂಡ ಸಮಾಜ ಒತ್ತಾಯ

ಬೀದರ್: ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಬೀದರ್ ರಾಜಗೊಂಡ ಸಮಾಜದ ವತಿಯಿಂದ ಆ.9ರಂದು ನಗರದಲ್ಲಿ ಭವ್ಯ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಯ ಸೇವಾ ಆಶ್ರಮದಿಂದ ಆರಂಭವಾದ ಮೆರವಣಿಗೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು, ಆದಿವಾಸಿ ಸಮುದಾಯದ ಸಾಂಸ್ಕೃತಿಕ ಪರಂಪರೆ, ಹಕ್ಕುಗಳು ಹಾಗೂ ವಿವಿಧ ಬೇಡಿಕೆಗಳ ಕುರಿತು ಗಮನ ಸೆಳೆದರು.
ಜಯ ಸೇವಾ ಆಶ್ರಮದಿಂದ ಮೆರವಣಿಗೆ ಆರಂಭವಾಗುವ ಸಂದರ್ಭದಲ್ಲಿ 70ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, 10 ನಾಲ್ಕು ಚಕ್ರ ವಾಹನಗಳು ಹಾಗೂ ಡಿಜೆ ತಂಡದೊAದಿಗೆ ಸಮುದಾಯದವರು ಪಾಲ್ಗೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಹಾಗೂ ಹಿರಿಯರು ಹಳದಿ ಬಣ್ಣದ ವಸ್ತ್ರ ಧರಿಸಿ, ಏಳು ಬಣ್ಣಗಳ ಗೊಂಡ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಗೊಂಡ ಸಮುದಾಯದ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಗುರುತನ್ನು ಬಿಂಬಿಸುವ ರೀತಿಯಲ್ಲಿ ಮೆರವಣಿಗೆ ಗಮನ ಸೆಳೆಯಿತು.
ಮೆರವಣಿಗೆ ಆರಂಭಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ರಾಜಗೊಂಡ ಸಮುದಾಯದ ಕ್ರಾಂತಿವೀರರಾದ ಬಕ್ತ ಬುಲಂದ್ ಶಾಹ್ ಉಯಿಕೆ, ರಾಣಿ ದುರ್ಗಾವತಿ ಮಡಾವಿ, ರಾಣಿ ಕಮಲಾಪತಿ ಸಲ್ಲಾಮ್ ಹಾಗೂ ವೀರ ಬಾಬುರಾವ್ ಸಡಮಾಕಿ ಅವರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ರಾಜಗೊಂಡ ಸಮಾಜದ ಅಧ್ಯಕ್ಷ ಶಾಮು ಪುಶನಾಕೆ ಮಾತನಾಡಿ, ‘ಜಯ ಸೇವಾ’ ಎಂಬುದು ಗೊಂಡ ಸಮುದಾಯದ ಅಭಿವಾದನೆಯಾಗಿದ್ದು, ಪರಸ್ಪರ ಗೌರವದಿಂದ ನಮಸ್ಕರಿಸುವ ಸಂಪ್ರದಾಯದ ಪ್ರತೀಕವಾಗಿದೆ ಎಂದು ವಿವರಿಸಿದರು.
ರಾಜಗೊಂಡ ಸಮುದಾಯವು ಸುಮಾರು 70 ವರ್ಷಗಳಿಂದ ಬೀದರ್‌ನಲ್ಲಿ ವಾಸಿಸುತ್ತಿದ್ದರೂ, ಸಮುದಾಯದ ವೀರ ನಾಯಕರು ಹಾಗೂ ಹೋರಾಟಗಾರರ ಹೆಸರಿನಲ್ಲಿ ನಗರದಲ್ಲಿ ಯಾವುದೇ ಮೂರ್ತಿ ಅಥವಾ ವೃತ್ತ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು.
ವಿಶೇಷವಾಗಿ ಕ್ರಾಂತಿವೀರರಾದ ರಾಣಿ ದುರ್ಗಾವತಿ ಮಡಾವಿ ಅವರ ಮೂರ್ತಿಯನ್ನು ಬೀದರ್ ನಗರದಲ್ಲಿ ಪ್ರತಿಷ್ಠಾಪಿಸಲು ಸರ್ಕಾರ ಅನುಮತಿ ನೀಡಬೇಕು. ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲ ರಾಜಕೀಯ ನಾಯಕರು ಪಕ್ಷಭೇದ ಮರೆತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಮುದಾಯದ ಇತಿಹಾಸ ಮತ್ತು ಹೋರಾಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವೀರ ನಾಯಕರ ಸ್ಮಾರಕಗಳು ಅಗತ್ಯವಾಗಿವೆ ಎಂದು ಅವರು ತಿಳಿಸಿದರು.
ರಾಜಗೊಂಡ ಸಮಾಜದ ಯುವ ಮುಖಂಡ ವಿವೇಕ ರಾಯಸೀಡಂ ಮಾತನಾಡಿ, ಸುಮಾರು 32 ವರ್ಷಗಳಿಂದ ಬೀದರ್ ಸೇರಿದಂತೆ ವಿವಿಧೆಡೆ ವಿಶ್ವ ಆದಿವಾಸಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಆದಿವಾಸಿ ಸಮುದಾಯಗಳ ಹಕ್ಕು, ಅಸ್ತಿತ್ವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ದಿನವಾಗಿರುವ ಆಗಸ್ಟ್ 9ರಂದು ಕರ್ನಾಟಕ ಸರ್ಕಾರ ಸರ್ಕಾರಿ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಜಗೊಂಡ ಸಮುದಾಯದ ವೀರ ನಾಯಕರು ಮತ್ತು ಹೋರಾಟಗಾರರ ಜೀವನ ಹಾಗೂ ಕೊಡುಗೆಗಳನ್ನು ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಗೊಂಡಿ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಆದಿವಾಸಿ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಗೊಂಡಿ ಭಾಷೆಯನ್ನು ಬೋಧಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕುರ್ ಮಾತನಾಡಿ, ಆದಿವಾಸಿಗಳು ದೇಶದ ಮೂಲನಿವಾಸಿಗಳಾಗಿದ್ದು, ಅವರ ಇತಿಹಾಸ ಮತ್ತು ಸಂಸ್ಕೃತಿ ಅತ್ಯಂತ ಪ್ರಾಚೀನವಾಗಿದೆ. ಆದಿವಾಸಿ ಸಮುದಾಯದ ಪರಂಪರೆ, ಸಂಸ್ಕೃತಿ ಹಾಗೂ ಹಕ್ಕುಗಳನ್ನು ಸಂರಕ್ಷಿಸುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮೆರವಣಿಗೆಯು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ ಶಿವಾಜಿ ಮಹಾರಾಜ ವೃತ್ತದಲ್ಲಿ ಮುಕ್ತಾಯಗೊಂಡಿತು. ಮಾರ್ಗದುದ್ದಕ್ಕೂ ಸಮುದಾಯದವರು ಗೊಂಡ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಘೋಷಣೆಗಳನ್ನು ಕೂಗಿದರು.

ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಶಾಸಕ ರಹೀಮ್ ಖಾನ್, ರಾಜಗೊಂಡ ಸಮಾಜದ ರವಿ ಮಮಲಾಜಿ ಸಡಮಾಕಿ, ಠಾಕುರ್ ಉಯಿಕೆ, ಜಯವಂತ ರಾಯಸೀಡಂ, ಸುನೀಲ್ ಸಡಮಾಕಿ, ರಾಜೇಂದ್ರ ಪಾರ್ಧಿ, ಮಹೇಶ ವಾಘಮಾರೆ ಮೇದ, ರೇಖಾ ರಾಕೇಶ ಮೇದ, ಠಾಕೂರ್ ಉಯ್‌ಕೆ, ನಂದು ಪಾರ್ಧಿ, ದತ್ತಾತ್ರಿ ಮಾಣಿಕಪ್ಪಾ, ಸೂರ್ಯಕಾಂತ , ಜಿತೇಂದ್ರ ಚಂದ್ರಶೇಖರ ಸೇರಿದಂತೆ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮುದಾಯದ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe