Popular Posts

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸಾಲ ಹಾಗೂ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಬೀದರ್, ಆಗಸ್ಟ್ 25  : 2026-27ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ್ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿಯಮಿತ) ವ್ಯವಸ್ಥಾಪಕರು ತಿಳಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಬೀದರ್ ಜಿಲ್ಲೆ ಬೀದರ್ ಇವರ ವತಿಯಿಂದ 2026-27ನೇ ಸಾಲಿನಲ್ಲಿ ಕೆಳಗಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮತೀಯ ಅಲ್ಪಸಂಖ್ಯಾತರು ಅಂದರೆ ಮುಸ್ಲಿಂ, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಸಿಖ್ ಸಮುದಾಯಕ್ಕೆ ಸೇರಿದ, ವಾರ್ಷಿಕ ಆದಾಯ ನಗರ ಪ್ರದೇಶದವರಿಗೆ ₹1,03,000 ಹಾಗೂ ಗ್ರಾಮೀಣ ಪ್ರದೇಶದವರಿಗೆ ₹81,000 ಒಳಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಪಡೆದು ಅರ್ಜಿಯಲ್ಲಿ ನಮೂದಿಸಬೇಕಾಗಿರುತ್ತದೆ. ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.
ಅರಿವು ಸಾಲದ ಯೋಜನೆ: ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವೃತ್ತಿಪರ ಕೋರ್ಸ್‌ಗಳಾದ M.B.B.S., MD, MS, B.E., B.Tech, M.E., M.Tech, BDS, MDS, B.Ayush, MBA, MCA, LLB, B.Sc (Nursing) ಕೋರ್ಸ್‌ಗಳನ್ನು ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ₹50,000 ರಿಂದ ₹5,00,000 ವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ವಿದ್ಯಾರ್ಥಿಯು ಶೇ. 2ರ ಸೇವಾ ಶುಲ್ಕದೊಂದಿಗೆ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಕುಟುಂಬದ ವಾರ್ಷಿಕ ಆದಾಯ ಮಿತಿ ₹8.00 ಲಕ್ಷದೊಳಗಿರಬೇಕು.
ಸ್ವಾವಲಂಬಿ ಸಾರಥಿ ಯೋಜನೆ (ಪ್ಯಾಸೆಂಜರ್ ಆಟೋರಿಕ್ಷಾ/ಗೂಡ್ಸ್ ವಾಹನ, ಟ್ಯಾಕ್ಸಿ ವಾಹನ ಖರೀದಿಸಲು ಸಹಾಯಧನ ಯೋಜನೆ): ಈ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳು/ ಷೆಡ್ಯೂಲ್ಡ್ ಬ್ಯಾಂಕ್/ ಆರ್‌.ಬಿ.ಐ. ನಿಂದ ಮಾನ್ಯತೆ ಪಡೆದ ಬ್ಯಾಂಕುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ. ಆಟೋರಿಕ್ಷಾ ಖರೀದಿಗಾಗಿ ₹75,000 ಸಹಾಯಧನ ಮತ್ತು ಟ್ಯಾಕ್ಸಿ/ಸರಕು ವಾಹನ ಖರೀದಿಸಲು ₹3,00,000 ಸಹಾಯಧನ ನೀಡಲಾಗುವುದು.
ಶ್ರಮಶಕ್ತಿ ಸಾಲದ ಯೋಜನೆ: ಗ್ರಾಮೀಣ ಕುಶಲಕರ್ಮಿಗಳು ಹಾಗೂ ವೃತ್ತಿ ಆಧಾರಿತ ಕಸುಬುದಾರರು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಕಸುಬಿಗೆ ಅನುಗುಣವಾಗಿ ಗರಿಷ್ಠ ₹50,000 ನೇರ ಸಾಲ ಕೊಡಲಾಗುವುದು. ಇದರಲ್ಲಿ ಶೇ. 50ರಷ್ಟು ಸಾಲ ಮತ್ತು ಶೇ. 50ರಷ್ಟು ಬ್ಯಾಕ್-ಎಂಡ್ ಸಬ್ಸಿಡಿ ಇರುತ್ತದೆ. ಈ ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ ಹಣ್ಣು ಮತ್ತು ತರಕಾರಿ ಮಾರಾಟ, ಮಾಂಸದ ಅಂಗಡಿ/ ಮೀನು ಮಾರಾಟ ಇತ್ಯಾದಿ ವೃತ್ತಿಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ ಗರಿಷ್ಠ ₹1,00,000 ದವರೆಗೆ ನೇರ ಸಾಲ ನೀಡಲಾಗುವುದು. ಇದರಲ್ಲಿ ಶೇ. 50ರಷ್ಟು ಸಾಲ ಮತ್ತು ಶೇ. 50ರಷ್ಟು ಬ್ಯಾಕ್-ಎಂಡ್ ಸಬ್ಸಿಡಿ ಇರುತ್ತದೆ. ಈ ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ರೇಷ್ಮೆ ಕೃಷಿ ಪ್ರೋತ್ಸಾಹ ಯೋಜನೆ: ಕರ್ನಾಟಕ ರಾಜ್ಯವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 7,629 ಕುಟುಂಬಗಳು ರೇಷ್ಮೆ ನೂಲು ಬಿಚ್ಚಾಣಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ಶೇ. 75ರಷ್ಟು ಅಲ್ಪಸಂಖ್ಯಾತರಾಗಿರುತ್ತಾರೆ. ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದನೆಗಾಗಿ ರೇಷ್ಮೆ ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಕುಟುಂಬಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಸಾಲ ಹಾಗೂ ಸಹಾಯಧನ ನೀಡಲಾಗುತ್ತದೆ.
ಗಂಗಾ ಕಲ್ಯಾಣ ಹಾಗೂ ಏತ ನೀರಾವರಿ ಯೋಜನೆ : (ಅ) ಗಂಗಾ ಕಲ್ಯಾಣ ಯೋಜನೆ: ಜಿಲ್ಲೆಯಲ್ಲಿ ಖಾಯಂ ವಾಸವಾಗಿರುವ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ಗುಂಪಿಗೆ ಸೇರಿದ (1 ಎಕರೆ 20 ಗುಂಟೆಯಿಂದ 5 ಎಕರೆ ಒಳಗಿರುವ) ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ, ತಹಸೀಲ್ದಾರರಿಂದ ಪಡೆದ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹಾಗೂ ಭೂ-ಹಿಡುವಳಿ ಪತ್ರದೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
(ಆ) ಏತ ನೀರಾವರಿ ಯೋಜನೆ: ಈ ಯೋಜನೆಯಡಿ ನಿರಂತರವಾಗಿ ಹರಿಯುತ್ತಿರುವ ನೀರನ್ನು (ನದಿ) ಪೈಪ್‌ಲೈನ್ ಮೂಲಕ ಮೇಲಕ್ಕೆ ಎತ್ತಿ, ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಇದು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.
ನವೋದ್ಯಮ ಯೋಜನೆ (Elevate Program): ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಯುವಕ/ಯುವತಿಯರಿಗೆ ನವೋದ್ಯಮಗಳನ್ನು (Startups) ಪ್ರಾರಂಭಿಸಲು ಉತ್ತೇಜನ ನೀಡುವ ಸಲುವಾಗಿ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ Elevate (Minorities) 2025 ರ ಮಾರ್ಗಸೂಚಿಗಳಂತೆ ಜಾರಿಗೊಳಿಸಲಾಗುತ್ತಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.
ಫಾಸ್ಟ್ ಫುಡ್ ಟ್ರಕ್ ಯೋಜನೆ : ನಿರುದ್ಯೋಗಿ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯಗಳಿಗಾಗಿ ನಿಗಮದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಘಟಕ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಠ ₹3.00 ಲಕ್ಷ ಸಹಾಯಧನ ನೀಡಲಾಗುವುದು. ಇದನ್ನು ರಾಷ್ಟ್ರೀಕೃತ ಬ್ಯಾಂಕುಗಳು/ ಷೆಡ್ಯೂಲ್ಡ್ ಬ್ಯಾಂಕ್/ ಆರ್‌.ಬಿ.ಐ. ಮಾನ್ಯತೆ ಪಡೆದ ಬ್ಯಾಂಕುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ: ಸ್ವ-ಸಹಾಯ ಗುಂಪುಗಳನ್ನು ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಸಿ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು, ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ. 50 ಅಥವಾ ಗರಿಷ್ಠ ₹2.00 ಲಕ್ಷ ಸಹಾಯಧನ ನೀಡಲಾಗುವುದು. ಈ ಸಹಾಯಧನವು ಬ್ಯಾಕ್-ಎಂಡ್ ಸಬ್ಸಿಡಿಯಾಗಿದ್ದು, ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.
ಸಿಖ್ಖಲಿಗಾರ ಅಭಿವೃದ್ಧಿ ಯೋಜನೆ : ಈ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೆತ್ತಿಕೊಳ್ಳಲು ₹50,000 ಸಾಲ ಹಾಗೂ ₹50,000 ಸಹಾಯಧನ ನೀಡಲಾಗುವುದು. ಗೂಡ್ಸ್ ಟೆಂಪೋ/ವಾಹನ ಖರೀದಿಸಲು ವಾಹನದ ಮೊತ್ತದ ಶೇ. 33ರಷ್ಟು ಅಂದರೆ ಗರಿಷ್ಠ ₹1.50 ಲಕ್ಷ ಸಹಾಯಧನ ಒದಗಿಸಲಾಗುವುದು.
ಸಮುದಾಯ ಆಧಾರಿತ ತರಬೇತಿ ಯೋಜನೆ : ಕೌಶಲ್ಯ ಆಧಾರಿತ ತರಬೇತಿಗಳಾದ – ಡ್ರೋನ್ ಆಪರೇಷನ್ ಟ್ರೇನಿಂಗ್ (ಬೆಂಗಳೂರು ಮತ್ತು ಬೆಳಗಾವಿ), CIMA (Chartered Institute of Management Accountants) ಕೋಚಿಂಗ್, ಕ್ಲೌಡ್ ಕಂಪ್ಯೂಟಿಂಗ್, AI/ML & Cyber Security (ಕಲಬುರಗಿ ಮತ್ತು ಮಂಗಳೂರು) ಹಾಗೂ Data Analytics & BI, Apple Technical & Professional Certification (ಬೆಂಗಳೂರು) ನಲ್ಲಿ ಉದ್ಯೋಗ ಆಧಾರಿತ ಫ್ಯೂಚರ್ ಸ್ಕಿಲ್ಸ್ ತರಬೇತಿ ನೀಡಲಾಗುತ್ತದೆ.
ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ : ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾಭ್ಯಾಸ (Overseas Education) ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು. ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುತ್ತದೆ.
ವ್ಯಾಪಾರ/ಉದ್ದಿಮೆ ನೇರ ಸಾಲ ಯೋಜನೆ: ವಿವಿಧ ವ್ಯಾಪಾರ, ಸೇವಾ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ಕೈಗೊಳ್ಳಲು ನಿಗಮದ ಮೂಲಕ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಶೇ. 4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಸಾಂತ್ವನ ಯೋಜನೆ : ನೈಸರ್ಗಿಕ ವಿಪತ್ತುಗಳಲ್ಲಿ ಮನೆ ಅಥವಾ ಅಂಗಡಿಗಳನ್ನು ಕಳೆದುಕೊಂಡ ಅಲ್ಪಸಂಖ್ಯಾತರ ಕುಟುಂಬಗಳಿಗೆ నిగಮದ ವತಿಯಿಂದ ₹5,00,000 ಸಾಲ ಮತ್ತು ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿವರ : ಎಲ್ಲಾ ಯೋಜನೆಗಳಿಗೆ ಆನ್‌ಲೈನ್ ಮೂಲಕ www.kmdconline.karnataka.gov.in ವೆಬ್‌ಸೈಟ್‌ನಲ್ಲಿ ದಿನಾಂಕ: 17 ಸೆಪ್ಟೆಂಬರ್ 2026ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮೌಲಾನಾ ಆಜಾದ್ ಭವನ, 1ನೇ ಮಹಡಿ, ಗುರುನಾನಕ್ ಝೀರಾ ದಿಂದ ಚಿಕ್ಕಪೇಟೆ ರಿಂಗ್ ರಸ್ತೆ, ಬೀದರ್-585402 ಅಥವಾ ದೂರವಾಣಿ ಸಂಖ್ಯೆ 08482-467330 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading