1
1

kaliyugad koogu
ಬೀದರ್:-ಬೀದರ್ ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ ಗುತ್ತಿಗೆದಾರರು ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಬಿಲ್ಲುಗಳನ್ನು ತಕ್ಷಣ ಪಾವತಿಸುವಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಫೆಬ್ರವರಿ 23 ರಂದು ನಡೆಯಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಗಮನದಲ್ಲಿಟ್ಟು ಸಲ್ಲಿಸಿದ ಮನವಿ ಪತ್ರದಲ್ಲಿ, ಟೆಂಡರ್ ಮೂಲಕ ಕೈಗೆತ್ತಿಕೊಂಡ ಹಲವು ಕಾಮಗಾರಿಗಳನ್ನು ಗುತ್ತಿಗೆದಾರರು ಪೂರ್ಣಗೊಳಿಸಿದ್ದರೂ, ಪಾಲಿಕೆಯಿಂದ ಇನ್ನೂ ಬಿಲ್ಲು ಪಾವತಿ ಆಗಿಲ್ಲ ಎಂದು ಆರೋಪಿಸಲಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ಖಾಸಗಿ ಮೂಲಗಳಿಂದ ಸಾಲ ಪಡೆದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಗುತ್ತಿಗೆದಾರರ ಸಂಕಷ್ಟವನ್ನು ಮನಗಂಡು ಬಾಕಿ ಬಿಲ್ಲುಗಳನ್ನು ಹಂತ ಹಂತವಾಗಿ ಪಾವತಿಸಬೇಕು ಎಂದು ಸಂಘ ಒತ್ತಾಯಿಸಿದೆ. ಜೊತೆಗೆ ಹಳೆಯ ಕಾಮಗಾರಿಗಳ ಬಿಲ್ಲು ಪಾವತಿ, PW-ಂ-Sಖ ಮಾನದಂಡಕ್ಕೆ ಅನುಗುಣವಾಗಿ ಅಂದಾಜು ಪಟ್ಟಿಗಳ ಸಿದ್ಧತೆ, ತುರ್ತು ಕಾಮಗಾರಿಗಳ ಸಮಾನ ಹಂಚಿಕೆ, ಗುತ್ತಿಗೆದಾರರ ಸಂಘಕ್ಕೆ ಪಾಲಿಕೆಯಲ್ಲಿ ಕೋಣೆ ಮಂಜೂರು, ಇ-ಪ್ರೊಕ್ಯೂರ್ಮೆಂಟ್ ಟೆಂಡರ್ಗಳನ್ನು ನಿಗದಿತ ದಿನಾಂಕದಲ್ಲೇ ತೆರೆಯುವ ಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದೆ.
ಇದಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಕಾರ್ಯಕ್ರಮಗಳಿಗೆ ಗುತ್ತಿಗೆದಾರರನ್ನು ಅಧಿಕೃತವಾಗಿ ಆಹ್ವಾನಿಸುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹ್ಮದ ಅನ್ವರ, ಖಜಾಂಚಿ ಮೋಹ್ಮದ ನಜೀಮೋದ್ದಿನ ಅಂಜುಮ, ಅಧ್ಯಕ್ಷ ಬುದ್ಧ ಪ್ರಕಾಶ ಭಾವಿಕಟ್ಟಿ, ಉಪಾಧ್ಯಕ್ಷ ರಾಜರಾಮ ಪಿ. ಚಿಟ್ಟಾ, ಶಿವನಾಂದ ಕೆ. ಪಾಟೀಲ್ (ಗೌರವಾಧ್ಯಕ್ಷರು), ಖಾಜಾ ಶೇಖ್ ಸಲೀಮ್, ಮಹದೇವ ಸ್ವಾಮಿ, ಮಹೇಶ ಚಿಂತಾಮಣಿ, ಅಬ್ದುಲ್ ನವೀದ ಶೇರಿಕಾರ, ಎಂ.ಡಿ. ಲೈಕ್ ಇಮ್ರಾನ್, ಶಿವಕುಮಾರ ಪಟೇಲ್, ಅಬ್ದುಲ್ ಹಮೀದ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.