ಬೀದರ್, ಆಗಸ್ಟ್ 09 (ಕಕ ವಾರ್ತೆ) : “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಹಾಗೂ “ಮಾಪ್ಅಪ್ ದಿನ” ಆಚರಣೆಯ ಅಂಗವಾಗಿ ಅಲ್ಬೆಂಡಜೋಲ್ ಮಾತ್ರೆಯನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ್ ಬಧೋಳೆ ಅವರು ಸೂಚಿಸಿದರು.
ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” (2026ರ ಆಗಸ್ಟ್ 10) ಹಾಗೂ “ಮಾಪ್ಅಪ್ ದಿನ” (ಆಗಸ್ಟ್ 17) ಆಚರಣೆಯ ನಿಮಿತ್ತ ಅಲ್ಬೆಂಡಜೋಲ್ ಮಾತ್ರೆ ವಿತರಣಾ ಕಾರ್ಯಕ್ರಮದ ಸಮನ್ವಯ ಸಮಿತಿ ಹಾಗೂ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದ ಅವರು, ಜಂತುಹುಳು ಹಾಗೂ ರಕ್ತಹೀನತೆ ನಿಯಂತ್ರಿಸಲು ಇದು ತುಂಬಾ ಪ್ರಯೋಜನಕಾರಿ ಎಂದರು. ಅಲ್ಲದೆ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಲ್ಲಿ ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಬೀದರ್ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಮಹಾದೇವಪ್ಪ ಮಳಗೆ ಅವರು ಮಾತನಾಡಿ, ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದೊಳಗಿನ ಒಟ್ಟು 6,12,389 ಮಕ್ಕಳ ಗುರಿ ಹೊಂದಲಾಗಿದೆ. ಇದರಲ್ಲಿ 1ರಿಂದ 2 ವರ್ಷದ 34,025 ಮಕ್ಕಳಿಗೆ ಅರ್ಧ ಅಲ್ಬೆಂಡಜೋಲ್ ಮಾತ್ರೆ ಹಾಗೂ 3ರಿಂದ 19 ವರ್ಷದ 5,78,364 ಮಕ್ಕಳಿಗೆ 1 ಪೂರ್ಣ ಮಾತ್ರೆ ನೀಡಬೇಕಾಗಿದ್ದು, ಒಟ್ಟು 5,95,377 ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯ ಅವಶ್ಯಕತೆಯಿರುತ್ತದೆ. ಜಿಲ್ಲೆಯಾದ್ಯಂತ 2026ರ ಆಗಸ್ಟ್ 10 ರಂದು ಪ್ರತಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಬೆಂಡಜೋಲ್ ಮಾತ್ರೆ ವಿತರಿಸಲಾಗುತ್ತಿದ್ದು, ಬಾಕಿ ಉಳಿದ ಮಕ್ಕಳಿಗೆ 2026ರ ಆಗಸ್ಟ್ 17 ರಂದು ‘ಮಾಪ್-ಅಪ್’ ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ ಎಂದರು.
ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನ್ವೇಶ್ವರ ನೀರಗುಡೆ ಅವರು ಮಾತನಾಡಿ, ಅಲ್ಬೆಂಡಜೋಲ್ ಮಾತ್ರೆಯನ್ನು ಪ್ರತಿಯೊಂದು ಮಗುವೂ ಅಗಿದು/ಚೀಪಿ ಸೇವಿಸುವುದರಿಂದ ದೇಹದಲ್ಲಿರುವ ಪೋಷಕಾಂಶಗಳನ್ನು ಹಾನಿಗೊಳಿಸುವ ಜಂತುಹುಳುಗಳನ್ನು ನಾಶಮಾಡಬಹುದು ಎಂದು ತಿಳಿಸಿದರು.
ಈ ಮಾತ್ರೆಯನ್ನು ವರ್ಷದಲ್ಲಿ ಎರಡು ಬಾರಿ ಸೇವಿಸುವುದರಿಂದ ದೇಹದಲ್ಲಿ ಜಂತುಹುಳುಗಳನ್ನು ನಿಯಂತ್ರಿಸಿ, ಮಕ್ಕಳ ಅಪೌಷ್ಟಿಕತೆಯನ್ನು ತಡೆಯಬಹುದಾಗಿದೆ. ಅಲ್ಲದೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ವೃದ್ಧಿಯಾಗಿ, ಕಲಿಕಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಎಲ್ಲ ಮಕ್ಕಳೂ ಈ ಮಾತ್ರೆಯನ್ನು ಕಡ್ಡಾಯವಾಗಿ ಸೇವಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಕಿರಣ್ ಪಾಟೀಲ್, ಡಿ.ಎಂ.ಓ ಡಾ. ರಾಜಶೇಖರ ಪಾಟೀಲ್, ಡಿ.ಎಲ್.ಓ ಡಾ. ಕಿರಣ್ ಪಾಟೀಲ್, ಡಿ.ಡಿ.ಪಿ.ಯು ಪ್ರಭಾರಿ ಉಪನಿರ್ದೇಶಕರಾದ ಚಂದ್ರಕಾಂತ ಗಂಗಶೆಟ್ಟಿ, ಡಿ.ಡಿ.ಪಿ.ಐ ಪ್ರಭಾರಿ ಶ್ರೀಮತಿ ಪ್ರತಿಭಾ ಆರ್., ಡಾ. ಮಂಜು ಭೋಸ್ಲೆ, ಸರ್ಕಾರಿ ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಂಶುಪಾಲರಾದ ಶಬ್ರೇಶ ಹಂಚೆ, ಡಿ.ಡಬ್ಲ್ಯೂ.ಸಿ.ಡಿ ಶ್ರೀಕಾಂತ್, ಮಹಾನಗರ ಪಾಲಿಕೆಯ ಹೆಚ್.ಐ.ಓ ವಿನೋದಕುಮಾರ್, ಡಿ.ಹೆಚ್.ಇ.ಓ ಶ್ರೀಮತಿ ಶಶಿಕಲಾ ಬಿ. ಸಿನ್ನೂರ, ಬೀದರ್ನ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿ.ಪಿ.ಎಮ್ ಉಮೇಶ್ ಬಿರಾದಾರ್, ಪ್ರಭಾರಿ ಡಿ.ಎನ್.ಓ ಭಾಗ್ಯಲಕ್ಷ್ಮಿ, ಎಮ್&ಇ ವ್ಯವಸ್ಥಾಪಕರಾದ ಸುನೀಲ್, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶಿವಶಂಕರ ಬೇಮಳಗಿ, ಲೋಕೇಶ್ ಐ.ಎಫ್.ವಿ, ವಿ.ಸಿ.ಸಿ.ಎಮ್ ಗುರುನಾಥ್, ಡಿ.ಡಿ.ಎಮ್ ರವಿ, ಡಾ. ಶೈಲಜಾ, ಡಾ. ಜೈಶಾಲಿನಿ ಮುಡಬಿ, ಕಾರ್ಯಕ್ರಮ ಸಹಾಯಕ ದೇವಿದಾಸ್, ಸನ್ನಿಪಾಲ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Related
Discover more from ಕಲಿಯುಗದ ಕೂಗು
Subscribe to get the latest posts sent to your email.