ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ಬೀದರ್ ಬಿಜೆಪಿ ನಿಯೋಗ ಭೇಟಿ ಮಾಡಿ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಮನವಿ ಸಲ್ಲಿಸಿತು.
12ನೇ ಶತಮಾನದಲ್ಲಿಯೇ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಣ್ಣನವರು ಸಮಾಜ ಸುಧಾರಣೆಯ ಮೂಲಕ ದೇಶಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಜಾತಿ, ವರ್ಣ, ವಂಶ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿ ಪ್ರತಿಯೊಬ್ಬರಿಗೂ ಸಮಾನ ಗೌರವ ಹಾಗೂ ಬದುಕುವ ಹಕ್ಕು ಇರಬೇಕು ಎಂಬ ವಿಚಾರವನ್ನು ಸಾರಿದ್ದಾರೆ.
ಅನುಭವ ಮಂಟಪದಲ್ಲಿ 770 ಅಮರಗಣಂಗಳು ಭಾಗವಹಿಸಿದ್ದರು ಎಂಬ ಉಲ್ಲೇಖಗಳಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಾದ ವಿಚಾರ ಸ್ವಾತಂತ್ರ್ಯ, ಸಮಾನತೆ ಮತ್ತು ಮುಕ್ತ ಚರ್ಚೆಗೆ ಬಸವಣ್ಣನವರು ಶತಮಾನಗಳ ಹಿಂದೆಯೇ ಮಹತ್ವ ನೀಡಿದ್ದರು. 13ನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ಮ್ಯಾಗ್ನಾ ಕಾರ್ಟಾ ಹೊರಬರುವುದಕ್ಕೂ ಮುನ್ನವೇ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ವಿಚಾರ ವಿನಿಮಯದ ವಿಶಿಷ್ಟ ಪರಂಪರೆಯನ್ನು ರೂಪಿಸಿದ್ದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ ತತ್ವ, ಚಿಂತನೆ ಹಾಗೂ ಅನುಭವ ಮಂಟಪದ ಪರಂಪರೆಯನ್ನು ಪ್ರತಿಬಿಂಬಿಸುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ₹200 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದರು. ಅದರ ಫಲವಾಗಿ ಇದೀಗ ಬಸವಕಲ್ಯಾಣದಲ್ಲಿ ಭವ್ಯ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ವಿವಿಧ ವರ್ಗಗಳ ಜನರು ಒಂದೇ ವೇದಿಕೆಯಲ್ಲಿ ವಿಚಾರ ವಿನಿಮಯ ನಡೆಸುವ ಪ್ರಜಾಪ್ರಭುತ್ವದ ಪರಂಪರೆಗೆ ಅವರು ಬುನಾದಿ ಹಾಕಿದ್ದರು. ‘ಕಾಯಕವೇ ಕೈಲಾಸ’ ಎಂಬ ತತ್ವದ ಮೂಲಕ ದುಡಿಮೆಯ ಗೌರವವನ್ನು ಹಾಗೂ ‘ದಾಸೋಹ’ದ ಮೂಲಕ ಹಂಚಿಕೊಂಡು ಬದುಕುವ ಮಾನವೀಯ ಮೌಲ್ಯವನ್ನು ಜಗತ್ತಿಗೆ ಸಾರಿದ್ದಾರೆ ಎಂದು ನಿಯೋಗ ತಿಳಿಸಿತು.
ಬಸವಣ್ಣನವರ ಚಿಂತನೆಗಳು ಭಾರತೀಯ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವದ ಆಶಯಗಳಿಗೆ ಅತ್ಯಂತ ಹತ್ತಿರವಾಗಿವೆ. ಹೀಗಾಗಿ ಅವರ ಆದರ್ಶಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಇಡೀ ದೇಶದ ಜನತೆಗೆ ಪ್ರೇರಣೆಯಾಗಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಬಸವ ಜಯಂತಿಯನ್ನು ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವುದು, ದೇಶದ ವಿವಿಧ ರಾಜ್ಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಬಸವಣ್ಣನವರ ಜೀವನ ಮತ್ತು ವಿಚಾರಧಾರೆ ಕುರಿತು ರಾಷ್ಟ್ರೀಯ ಮಟ್ಟದ ಜಾಗೃತಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಲ್ಲಿ ಬೀದರ್ ಬಿಜೆಪಿ ನಿಯೋಗ ಮನವಿ ಮಾಡಿತು.
ವಿಶ್ವಗುರು ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ದೇಶದ ಪ್ರತಿಯೊಂದು ಭಾಗಕ್ಕೂ ತಲುಪಿಸುವ ಮೂಲಕ ಅವರ ಮಹಾನ್ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಪ್ರಭು ಬಿ. ಚವ್ಹಾಣ್, ಶರಣು ಸಲಗರ, ಸಿದ್ದು ಪಾಟೀಲ್, ಮಾಜಿ ಸಭಾಪತಿ ಶ್ರೀ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬೀದರ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಯರನಳ್ಳಿ, ಕಿರಣ್ ಪಾಟೀಲ್ ಹಾಗೂ ಪಕ್ಷದ ಮುಖಂಡರಾದ ಬಾಬು ವಾಲಿ, ಬಾಬುರಾವ ಕಾರಬಾರಿ, ಬಸವರಾಜ ಆರ್ಯ, ಈಶ್ವರ್ ಸಿಂಗ್ ಠಾಕೂರ್ ಉಪಸ್ಥಿತರಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.