Popular Posts

“ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ” ಶ್ರೀ. ಬ್ರಹ್ಮಕುಮಾರ ಪಿಯೂಶ್‌

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ ಮತ್ತು ಬ್ರಹ್ಮಾಕುಮಾರೀಸ್‌, ಬೀದರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ದಿನಾಂಕ 14-02-2026 ರಂದು “ವ್ಯಸನಮುಕ್ತ ಭಾರತ ಅಭಿಯಾನ (Drug Free India Campaign)” ಮತ್ತು ಮಾದಕ ವಸ್ತು ವಿರುದ್ಧ ತಿಳುವಳಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ಬ್ರಹ್ಮಕುಮಾರ ಪಿಯೂಶ್‌, ನಿರ್ದೇಶಕರು, ಬ್ರಹ್ಮಕುಮಾರೀಸ್‌, ನವದೇಹಲಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ಶರೀರದಲ್ಲಿ ಉಂಟಾಗುವ ಬದಲಾವಣೆ ಹಾಗೂ ದುಷ್ಪ್ರಭಾವವನ್ನು ಸರಳ ಪ್ರಯೋಗದಿಂದ ತಿಳಿಯಬಹುದಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ. ಮಿದುಳಿನಲ್ಲಿ ಬದಲಾವಣೆ ತಂದು ಇನ್ನಷ್ಟು ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ. ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಸನ ಅಪಘಾತಗಳಿಗೂ ಕಾರಣವಾಗುವುದು. ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ ಎಂದು ಹೇಳಿದರು.

ವಿಶ್ವವಿದ್ಯಾಲಯದ ಎನ್‌.ಎಸ್‌.ಎಸ್‌ ಯೋಜನಾಧಿಕಾರಿಗಳಾದ ಡಾ. ಚನ್ನಪ್ಪಗೌಡ ಬಿರಾದಾರ ರವರು ಮಾತನಾಡಿ ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನೂ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು ಎಂದರು.

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನ ಪ್ರಭಾರಿ ಡೀನ್‌ರವರಾದ ಡಾ. ಆರ್.ಜಿ. ಬಿಜೂರಕರ್‌ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮಲು ಸೇವನೆ ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಕರು, ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ತಿಳುವಳಿಕಾ ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ. ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿ ಉತ್ತಮ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.

ಪಶುವೈದ್ಯಕೀಯ ಮಹಾವಿದ್ಯಾಲಯ  ಬೀದರನ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್‌) ಘಟಕದ ಕಾರ್ಯಕ್ರಮಗಳ ಅಧಿಕಾರಿಯಾದ ಡಾ. ಪೃಥ್ವಿರಾಜ್‌ ರವರು ಕಾರ್ಯಕ್ರಮ ಆಯೋಜನೆ ಮತ್ತು ನಿರೂಪಣೆ ಮಾಡಿದರು. ಡಾ. ಪ್ರವೀಣ್‌ ಎಮ್.ಕೆ. ರವರು ವಂದಿಸಿದರು. ಮಹಾವಿದ್ಯಾಲಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!