1
1

ಬೀದರ್: ನಗರದಲ್ಲಿ ಮಾ. 1 ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಶುಕ್ರವಾರ ಇಲ್ಲಿಯ ಗಣೇಶ ಮೈದಾನದ ಗಣೇಶ ಮಂದಿರದಲ್ಲಿ ನಡೆದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸೇವಾ ಸಮಿತಿ ಕರೆದಿದ್ದ ಸಭೆಯಲ್ಲಿ ಮಠಾಧೀಶರು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ವ ರೀತಿಯಿಂದಲೂ ಜಯಂತಿಯನ್ನು ಯಶಸ್ವಿಗೊಳಿಸಲು ಸಲಹೆ ನೀಡಿದರು.
ಜಯಂತಿಯ ದಿನ ದೀಪಾಲಂಕಾರ, ಕಟೌಟ್, ಬ್ಯಾನರ್ಗಳ ಮೂಲಕ ನಗರವನ್ನು ಶೃಂಗರಿಸುವ, ಭಕ್ತರಿಗೆ ಪ್ರಸಾದ, ಬಿಲ್ವಪತ್ರಿ ಸಸಿ ಉಚಿತ ವಿತರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
ಜಿಲ್ಲಾ ಆಡಳಿತದಿಂದ ಹಮ್ಮಿಕೊಳ್ಳಲಾದ ಮೆರವಣಿಗೆ, ವೇದಿಕೆ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ಸರ್ವ ಸಮುದಾಯಗಳ ಜನ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಯಿತು.
ಸಾನಿಧ್ಯ ವಹಿಸಿದ್ದ ಹುಡಗಿಯ ವಿರೂಪಾಕ್ಷ ಶಿವಾಚಾರ್ಯರು ಮಾತನಾಡಿ, ರೇಣುಕಾಚಾರ್ಯರು ಸನಾತನ ವೀರಶೈವ ಲಿಂಗಾಯತ ಧರ್ಮದ ಮೂಲಕ ಇಡೀ ಮನುಕುಲದ ಕಲ್ಯಾಣಕ್ಕೆ ಶ್ರಮಿಸಿದ್ದರು. ಹೀಗಾಗಿ ಅವರ ಜಯಂತಿಯನ್ನು ವೈಭವದಿಂದ ಆಚರಿಸಬೇಕು ಎಂದು ಹೇಳಿದರು.
ಸರ್ಕಾರ ಹಾಗೂ ಕೆಲ ಮಠಾಧೀಶರು ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ರೇಣುಕಾಚಾರ್ಯರು ವೀರಶೈವ ಲಿಂಗಾಯತ ಧರ್ಮಕ್ಕಷ್ಟೇ ಅಲ್ಲ; ಇಡೀ ಮನುಕುಲಕ್ಕೆ ಗುರುವಾಗಿದ್ದಾರೆ. ಜಯಂತಿ ಆಚರಣೆಯೊಂದಿಗೆ ಅವರ ತತ್ವಗಳನ್ನು ಪಸರಿಸಬೇಕಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಮಠ, ಮಾನ್ಯಗಳು ಸರ್ಕಾರ ಮಾಡದ ಕಾರ್ಯಗಳನ್ನು ಮಾಡಿವೆ ಎಂದು ಸ್ಮರಿಸಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರೂ ಆದ ಯುಗಮಾನೋತ್ಸವ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾತನಾಡಿ, ಜಯಂತಿ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾ. 1 ರಂದು ಬೆಳಿಗ್ಗೆ ಗಣೇಶ ಮೈದಾನದಿಂದ ನಗರದ ಪ್ರಮುಖ ಬೀದಿಗಳ ಮೂಲಕ ರಂಗ ಮಂದಿರದ ವರೆಗೆ ಅಲಂಕೃತ ವಾಹನದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ರಂಗ ಮಂದಿರದಲ್ಲಿ ವೇದಿಕೆ ಸಮಾರಂಭ ಜರುಗಲಿದೆ. ಜನಪ್ರತಿನಿಧಿಗಳು, ಹರ, ಗುರು, ಚರ ಮೂರ್ತಿಗಳು, ಶಿವಾಚಾರ್ಯರು, ಅಧಿಕಾರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯರು ಮಾತನಾಡಿ, ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಮಾದರಿಯಾಗಿ ಆಚರಿಸಬೇಕು. ಬೀದರ್ನಿಂದ ಉತ್ತಮ ಸಂದೇಶ ಹೋಗಬೇಕು ಎಂದು ಸಲಹೆ ನೀಡಿದರು.
ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಎಚ್.ಕೆ.ಇ. ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ರಾಜ್ಯ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನ ಮಾಳಶೆಟ್ಟಿ, ಔರಾದ್ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ದೇಶಮುಖ, ಪ್ರಮುಖರಾದ ದಯಾನಂದ ಸ್ವಾಮಿ, ಕಾಶಿನಾಥ ಜಕ್ಕಾ, ಮಹೇಶ ಪಾಟೀಲ, ವರದಯ್ಯ ಸ್ವಾಮಿ, ಶಿವಕುಮಾರ ಪಾಟೀಲ ತೇಗಂಪುರ, ಶಿವಕುಮಾರ ಸ್ವಾಮಿ, ರಾಜಶೇಖರ ಮೆಟಕಾರಿ, ಸಂಗಮೇಶ ಡಿ.ಕೆ, ನಾಗಯ್ಯ ಸ್ವಾಮಿ, ನಾಗರಾಜ ಮಠ, ಶಿವಶಂಕರ ಬೆಳಮಗಿ, ಮಲ್ಲಿಕಾರ್ಜುನ ಗಚ್ಚಿನಮಠ, ಶರಣಯ್ಯ ಸ್ವಾಮಿ, ಬಸವರಾಜ ಸ್ವಾಮಿ ಮತ್ತಿತರರು ಇದ್ದರು.
ಪ್ರವೀಣ್ ಸ್ವಾಮಿ ಸ್ವಾಗತಿಸಿದರು. ಆಕಾಶ್ ನಿರೂಪಿಸಿದರು. ಅಂಬರೀಷ್ ಸ್ವಾಮಿ ವಂದಿಸಿದರು.