1
1

ಬೀದರ್: ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಶೀಘ್ರ ಮರು ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ನಗರದ ಮಾಸ್ಟಿಫ್ ಸೆಲೆಕ್ಟ್ ಹೋಟೆಲ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಪುನಃ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಈ ಸಂಬಂಧ ಬೇಗ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನೌಕರರಿಗೆ ಈಗಾಗಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಿದೆ. ಯೋಜನೆಯಡಿ 4,500 ನೌಕರರು ಉಚಿತ ಚಿಕಿತ್ಸೆ ಕೂಡ ಪಡೆದಿದ್ದಾರೆ. ಹಳೆಯ ಚಿಕಿತ್ಸಾ ವೆಚ್ಚ ಅನ್ವಯಿಸುತ್ತಿರುವ ಕಾರಣ ನೌಕರರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗಿದೆ. ಚಿಕಿತ್ಸಾ ವೆಚ್ಚದಲ್ಲಿ ಮಾರ್ಪಾಡು ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ತೆಲಂಗಾಣ ಹಾಗೂ ಮಹಾರಾಷ್ಟ್ರದ ಆಸ್ಪತ್ರೆಗಳನ್ನುಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ನೌಕರರಿಗೆ ಋತುಚಕ್ರ ರಜೆ ಮಂಜೂರು ಮಾಡಿಸಲಾಗಿದೆ. ನನೆಗುದಿಗೆ ಬಿದ್ದದ್ದ ಅನೇಕ ಕಾರ್ಯಗಳನ್ನು ಮಾಡಲಾಗಿದೆ. 2027-28 ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಕೊಡಿಸಲಾಗುವುದು ಎಂದು ಹೇಳಿದರು.
ಎರಡನೇ ಬಾರಿ ಸಂಘದ ರಾಜ್ಯ ಅಧ್ಯಕ್ಷನಾಗಿ ನೌಕರರ ಸೇವೆ ಸಲ್ಲಿಸುವ ಅವಕಾಶ ದೊರಕಿದೆ. ತಮ್ಮ ಗೆಲುವಿನಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸೋಮಶೇಖರ ಬಿರಾದಾರ ಚಿದ್ರಿ ಅವರನ್ನು ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗುವುದು ಎಂದು ಘೋಷಿಸಿದರು.
ಸಂಸದ ಸಾಗರ್ ಖಂಡ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಭವನದ ಮುಂದುವರಿದ ಕಾಮಗಾರಿಗೆ ಸಂಸದರ ನಿಧಿಯಿಂದ ಅನುದಾನ ಕೊಡಲಾಗುವುದು. ಜತೆಗೆ ನನ್ನ ತಂದೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದಲೂ ಅನುದಾನ ಕೊಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಔರಾದ್ ಶಾಸಕ ಪ್ರಭು ಚವಾಣ್ ಮಾತನಾಡಿ, ಔರಾದ್‍ನಲ್ಲಿ ನೌಕರರ ಭವನ ನಿರ್ಮಾಣಕ್ಕೆ ರೂ. 1 ಕೋಟಿ ಮಂಜೂರು ಮಾಡಿಸಲಾಗಿದೆ. ಈಗಾಗಲೇ ರೂ. 50 ಲಕ್ಷ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಜನಸೇವೆಯೇ ನಿಜವಾದ ದೇವರ ಪೂಜೆ. ಹೀಗಾಗಿ ನೌಕರರು ಕಾಳಜಿಯಿಂದ ಜನಸೇವೆ ಮಾಡಬೇಕು ಎಂದು ಹೇಳಿದರು.
ರಾಜಶೇಖರ ಚಿದ್ರಿ ಮಾತನಾಡಿ, ಸಂಘದ ಜಿಲ್ಲಾ ಘಟಕವು ರಾಜ್ಯ ಘಟಕದೊಂದಿಗೆ ಸದಾ ಇದೆ. ಸಂಘದ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಬೆಂಗಳೂರಿನ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಜಿಲ್ಲೆಯ ನೌಕರರಿಗೆ ಅಲ್ಲಿಗೆ ಹೋಗಿ ಬರಲು ತೊಂದರೆಯಾಗಲಿದೆ. ಹೀಗಾಗಿ ನೆರೆಯ ತೆಲಂಗಾಣದ ಹೈದರಾಬಾದ್ ಹಾಗೂ ಮಹಾರಾಷ್ಟ್ರ ಸೋಲಾಪುರ ಆಸ್ಪತ್ರೆಗಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್. ಬಸವರಾಜ, ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ಜಿಲ್ಲಾ ಘಟಕದ ಖಜಾಂಚಿ ದೇವಪ್ಪ ಚಾಂಬೋಳೆ, ಗೌರವಾಧ್ಯಕ್ಷ ಸೂರ್ಯಕಾಂತ ಬಿರಾದಾರ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಪದಾಧಿಕಾರಿಗಳಾದ ಗೌತಮ ಚಿಂತಲಗೇರಾ, ಅಬ್ದುಲ್ ಸತ್ತಾರ್ ಪಟೇಲ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಚಂದ್ರಕಾಂತ ಬನ್ನಾಳೆ, ಪಂಢರಿ ಅಡೆ, ನಾಗಪ್ಪ ಹಾವಣ್ಣ, ಸುನೀಲ್ ಕಸ್ತೂರೆ, ರಾಜಶೇಖರ ಉಪ್ಪಿನ್ ಮತ್ತಿತರರು ಇದ್ದರು.ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ ಸ್ವಾಗತಿಸಿದರು. ಚನ್ನಬಸವ ಹೇಡೆ ನಿರೂಪಿಸಿದರು.
Subscribe to get the latest posts sent to your email.