Popular Posts

ಕೆಕೆಆರ್‍ಟಿಸಿ ಮೃತ ನೌಕರರ ಕುಟುಂಬಗಳಿಗೆ ತಲಾ 12.50 ಲಕ್ಷ ರೂ. ಪರಿಹಾರ ಧನ ವಿತರಣೆ

ಕಲಬುರಗಿ, ಆಗಸ್ಟ್.24  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಅಕಾಲಿಕ ಮರಣ ಹೊಂದಿದ ಹಾಗೂ ಅಪಘಾತದಲ್ಲಿ ಜೀವ ಕಳೆದುಕೊಂಡ ಸಂಸ್ಥೆಯ ಚಾಲಕರು ಮತ್ತು ನೌಕರರ 18 ಕುಟುಂಬಗಳಿಗೆ ತಲಾ 12.50 ಲಕ್ಷ ರೂ. ಸುತ್ತೋಲೆ 2021 ರನ್ವಯ ಎರಡು ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ತಿಳಿಸಿದರು.
ಸೋಮವಾರ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಆಂತರಿಕ ಗುಂಪು ವಿಮಾ ಯೋಜನೆಯಡಿ ಮೃತಾವಲಂಭಿತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ಹಸ್ತಾಂತರಿಸಿ ಮಾತನಾಡಿ ಅವರು, ಸಂಸ್ಥೆಯು ಕೇವಲ ಉದ್ಯೋಗ ನೀಡುವ ಸ್ಥಳವಲ್ಲ, ಅದೊಂದು ಕುಟುಂಬವಿದ್ದಂತೆ. ನೌಕರರ ಹಠಾತ್ ಅಗಲಿಕೆಯಿಂದಾಗಿ ಆ ಕುಟುಂಬಗಳು ಎದುರಿಸುತ್ತಿರುವ ನೋವು ಕೇವಲ ಅವರದ್ದಲ್ಲ, ಸಂಸ್ಥೆಯದ್ದೂ ಆಗಿದೆ. ಮೃತರ ಕುಟುಂಬಸ್ಥರಿಗೆ ನಿಯಮಾನುಸಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಂಸ್ಥೆ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಪರಿಹಾರವಾಗಿ ಪಡೆದ ಹಣವನ್ನು ಮಧ್ಯವರ್ತಿಗಳ ಮಾತಿಗೆ ಮರುಳಾಗದೆ, ಸುರಕ್ಷಿತವಾಗಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕಾಗಿ ಬಳಸಿಕೊಳ್ಳುವಂತೆ ಕುಟುಂಬಸ್ಥರಿಗೆ ತಿಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ ಸುಶೀಲಾ ಅವರು ಮಾತನಾಡಿ ಸೇವೆಯಲ್ಲಿದ್ದಾಗ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ತೀವ್ರ ದುಃಖದ ಸಂಗತಿಯಾಗಿದೆ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲದಿದ್ದರೂ, ಅವರ ಕುಟುಂಬಗಳ ಭವಿಷ್ಯಕ್ಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಾಗಲಿ ಎಂಬ ಉದ್ದೇಶದಿಂದ ಈ ಆಂತರಿಕ ವಿಮಾ ಯೋಜನೆಯ ಮೂಲಕ ಪರಿಹಾರವನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಪಡೆದ ಹಣವನ್ನು ವ್ಯರ್ಥ ಪಡಿಸದೆ ಕುಟುಂಬದ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಭದ್ರವಾಗಿ ಬಳಸಿಕೊಳ್ಳಿ, ಇದೇ ತಿಂಗಳ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಗಮದ ಇಬ್ಬರು ಸಿಬ್ಬಂದಿ ಮೃತಪಟ್ಟು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಆ ಘಟನೆ ನಡೆದ ತಕ್ಷಣವೇ ನಿಗಮದ ಅಧ್ಯಕ್ಷರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಗಾಯಗೊಂಡ ಪ್ರಯಾಣಿಕರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ನಿಗಮದ ವತಿಯಿಂದಲೇ ಭರಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ನಿಗಮವು ಸದಾ ನೈತಿಕ ಮತ್ತು ಆರ್ಥಿಕ ಬೆಂಬಲವಾಗಿ ನಿಲ್ಲಲಿದೆ ಎಂದರು.
ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಸುನೀಲಕುಮಾರ್ ಚೇಂದ್ರಗಿ ಅವರು ಮಾತನಾಡಿ, ಸಂಸ್ಥೆಯು 2008 ರಿಂದ ಆಂತರಿಕ ಗುಂಪು ವಿಮಾ ಯೋಜನೆಯನ್ನು ಅನುμÁ್ಠನಗೊಳಿಸಿದ್ದು, ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ಈ ಯೋಜನೆಯು ಪ್ರಸ್ತುತ 12.50 ಲಕ್ಷ ರೂಪಾಯಿ ಪರಿಹಾರ ಸೌಲಭ್ಯವನ್ನು ಒದಗಿಸುವ ಮಟ್ಟಕ್ಕೆ ವಿಸ್ತರಿಸಿದೆ ಎಂದು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿಯು ಬ್ಯಾಂಕಗಳ ಒಪ್ಪಂದದೊಂದಿಗೆ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಲ್ಲಿ ಮೃತಪಟ್ಟ ಚಾಲಕ ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಭದ್ರತಾ ವಿಮೆಯನ್ನು ಒದಗಿಸುತ್ತಿದೆ. ಅಲ್ಲದೆ ಸಾಮಾನ್ಯ ಮರಣ ಹೊಂದಿದ ಸಿಬ್ಬಂದಿ ಕುಟುಂಬಕ್ಕೆ 5 ರಿಂದ 6 ಲಕ್ಷ ರೂಪಾಯಿಗಳ ಸಹಾಯಧನ ದೊರೆಯಲಿದೆ. ಸಂಸ್ಥೆಯಿಂದ ದೊರೆಯುವ ಈ ಪರಿಹಾರ ಮೊತ್ತವನ್ನು ಕುಟುಂಬದ ಭವಿಷ್ಯ ಹಾಗೂ ಸುಧಾರಣೆಗೆ ಸರಿಯಾಗಿ ಬಳಸಿಕೊಳ್ಳಬೇಕು. ಅನಗತ್ಯ ವೆಚ್ಚಗಳಿಗೆ ದುರುಪಯೋಗ ಪಡಿಸಿಕೊಳ್ಳದೆ ಮಕ್ಕಳು ಮತ್ತು ಕುಟುಂಬದ ಆಸರೆಯಾಗಿ ವಿನಿಯೋಗಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಕೆ. ಆರ್.ಟಿ.ಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ, ಮುಖ್ಯ ಯಾಂತ್ರಿಕ ಇಂಜಿನಿಯರ ಸಂತೋಷಕುಮಾರ,
ಮುಖ್ಯ ಲೆಕ್ಕಪತ್ರ ಅಧಿಕಾರಿ ಮತ್ತು ಹಣಕಾಸು ಸಲಹೆಗಾರ ಬಸವರಾಜ ಬೆಳಗಾವಿ, ಮುಖ್ಯ ಭದ್ರತೆ ಮತ್ತು ಜಾಗೃತಿ ಅಧಿಕಾರಿ ಬಸಪ್ಪ ಗುರಿಕಾರ, ಮುಖ್ಯ ಸಿಬ್ಬಂದಿ ಮತ್ತು ಸುರಕ್ಷತಾ ಅಧಿಕಾರಿ ಜಗದೀಶ, ಅನ್ವರ ಜಾವಿದ್, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading