ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ, ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಸರ್ಕಾರ ನೀಡಿರುವ ಉತ್ತರಕ್ಕೆ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ಅಧಿಕಾರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ ಪರಮೇಶ್ವರ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಸಮರ್ಪಕವಾಗಿ ಬೆಳೆ ಸಮೀಕ್ಷೆ ನಡೆಸದೆ, ಕಚೇರಿಯಲ್ಲಿ ಕುಳಿತು ಸಿದ್ಧಪಡಿಸಿದ ವರದಿಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಂಡಿರುವುದು ರೈತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಅಧಿಕಾರಿಗಳು ಸಚಿವರಿಗೆ ದಿಶಾಭೂಲ್ ಮಾಡಿದ್ದಾರೆ ಎಂದು ಪ್ರಭು ಚವ್ಹಾಣ ಕಿಡಿಕಾರಿದ್ದಾರೆ.
ಮುಂಗಾರು ಆರಂಭದಲ್ಲಿ ಸುಮಾರು ಎರಡು ತಿಂಗಳ ಕಾಲ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಕಾರ್ಯ ತೀವ್ರವಾಗಿ ವಿಳಂಬವಾಗಿದೆ. ಮಳೆಗಾಗಿ ಕಾದು ಕುಳಿತ ರೈತರು ನಂತರ ತಡವಾಗಿ ಬಿತ್ತನೆ ಮಾಡಿದ್ದು, ಮಳೆ ಮತ್ತೆ ಕೈಕೊಟ್ಟ ಪರಿಣಾಮ ಹಲವೆಡೆ ಒಂದೇ ಬೆಳೆಗೆ ಎರಡು-ಮೂರು ಬಾರಿ ಮರುಬಿತ್ತನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಬೀಜ, ಗೊಬ್ಬರ ಹಾಗೂ ಕೂಲಿ ವೆಚ್ಚದಲ್ಲಿ ಭಾರೀ ನಷ್ಟ ಅನುಭವಿಸಿದ್ದಾರೆ.
ಸೋಯಾಬೀನ್, ಉದ್ದು, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಮಳೆಯ ಕೊರತೆಯಿಂದ ಹಾನಿಗೊಳಗಾಗಿವೆ. ಕೆಲವೆಡೆ ಬೆಳೆ ಇದ್ದರೂ ಬೆಳವಣಿಗೆ ಕುಂಠಿತಗೊಂಡಿದ್ದು, ನಿರೀಕ್ಷಿತ ಇಳುವರಿ ಬರುವ ಸಾಧ್ಯತೆ ಕಡಿಮೆಯಾಗಿದೆ. ಹೊಲದಲ್ಲಿ ನಿಂತು ರೈತರ ನೋವು ನೋಡಿದರೆ ಮಾತ್ರ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಕುಳಿತು ವರದಿ ನೋಡಿದರೆ ರೈತರ ಸಂಕಷ್ಟ ಗೊತ್ತಾಗುವುದಿಲ್ಲ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ ಪರಮೇಶ್ವರ ಅವರು ನೀಡಿರುವ ಲಿಖಿತ ಉತ್ತರದಲ್ಲಿ, ಬರ ನಿರ್ವಹಣಾ ಕೈಪಿಡಿ-2020ರ ಮಾರ್ಗಸೂಚಿಗಳಂತೆ KSNDMC ವತಿಯಿಂದ ಮೌಲ್ಯಮಾಪನ ನಡೆಯುತ್ತಿದ್ದು, 2026ರ ಮುಂಗಾರು ಹಂಗಾಮಿನ ಅಂತ್ಯದವರೆಗೆ ಮುಂದಿನ ಸಾಪ್ತಾಹಿಕ ಮೌಲ್ಯಮಾಪನಗಳ ಆಧಾರದ ಮೇಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವುದು ಮತ್ತಷ್ಟು ನಿರಾಸೆ ಮೂಡಿಸಿದೆ.
ಕ್ಷೇತ್ರದಲ್ಲಿನ ಮಳೆ ಕೊರತೆಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದು ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅವರಿಗೆ ಮುಂಗಾರು ಮುಗಿದ ನಂತರ ಪರಿಹಾರ ನೀಡುವುದರಿಂದ ಏನು ಪ್ರಯೋಜನ? ಬೆಳೆ ಕೈಕೊಟ್ಟ ನಂತರ ಸರ್ಕಾರ ವರದಿ ತಯಾರಿಸುವುದರಿಂದ ರೈತನ ಹೊಟ್ಟೆ ತುಂಬುವುದಿಲ್ಲ. ಅಧಿಕಾರಿಗಳ ವರದಿಗಾಗಿ ರೈತರನ್ನು ತಿಂಗಳುಗಟ್ಟಲೆ ಕಾಯಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪ್ರಭು ಚವ್ಹಾಣ ಹೇಳಿದ್ದಾರೆ.
ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಕ್ಷೇತ್ರಕ್ಕೆ ಆಗಮಿಸಿ ಗ್ರಾಮವಾರು ಹಾಗೂ ಬೆಳೆವಾರು ಜಂಟಿ ಮರುಪರಿಶೀಲನೆ ನಡೆಸಬೇಕು. ಪ್ರತಿ ಗ್ರಾಮದಲ್ಲಿ ರೈತರ ಹೊಲಗಳಿಗೆ ತೆರಳಿ ಮಳೆಯ ಪ್ರಮಾಣ, ಬಿತ್ತನೆ ವಿಳಂಬ, ಮರುಬಿತ್ತನೆ, ಬೆಳೆ ಹಾನಿ ಮತ್ತು ಇಳುವರಿ ಕುಂಠಿತವಾಗಿರುವುದನ್ನು ನೈಜವಾಗಿ ದಾಖಲಿಸಬೇಕು. ಈ ವರದಿಯನ್ನು ಸರ್ಕಾರದ ಮುಂದೆ ಇಟ್ಟು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ತಪ್ಪು ವರದಿಯ ಹೊಣೆಯನ್ನು ರೈತರು ಏಕೆ ಹೊರಬೇಕು? ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಪರಿಹಾರದಿಂದ ವಂಚಿತರಾಗಬೇಕೇ? ಇದನ್ನು ನಾವು ಸಹಿಸುವುದಿಲ್ಲ. ಔರಾದ-ಕಮಲನಗರವನ್ನು ಬರಪೀಡಿತವೆಂದು ಘೋಷಿಸಲೇಬೇಕು. ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕ ಪ್ರಭು ಚವ್ಹಾಣ ಗುಡುಗಿದ್ದಾರೆ.
ಸರ್ಕಾರ ಕೂಡಲೇ ರೈತರ ಪರವಾಗಿ ಕ್ರಮವಹಿಸದಿದ್ದರೆ ರೈತರೊಂದಿಗೆ ಸೇರಿ ಹಂತ ಹಂತವಾಗಿ ತೀವ್ರ ಹೋರಾಟ ನಡೆಸಲಾಗುವುದು. ರಸ್ತಾ ರೋಕೊ, ಪ್ರತಿಭಟನೆ ಹಾಗೂ ಕೃಷಿ ಇಲಾಖೆಯ ಕಚೇರಿಗಳಿಗೆ ಮುತ್ತಿಗೆ ಸೇರಿದಂತೆ ಯಾವುದೇ ಹೋರಾಟಕ್ಕೂ ಹಿಂದೇಟು ಹಾಕುವುದಿಲ್ಲ. ಅಗತ್ಯವಿದ್ದರೆ ಇನ್ನಷ್ಟು ಕಠಿಣ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Discover more from ಕಲಿಯುಗದ ಕೂಗು
Subscribe to get the latest posts sent to your email.