Popular Posts

ಬಿಎಸ್‌ಎಸ್‌ಕೆ ಹರಾಜು ಪ್ರಕ್ರಿಯೆ ತಡೆದು ಲೀಜ್‌ಗೆ ನೀಡಿ ಪುನಶ್ಚೇತನಗೊಳಿಸಲು ಮನವಿ

ಬೀದರ್ :ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆಯನ್ನು ತಡೆದು, ಕಾರ್ಖಾನೆಯನ್ನು ಲೀಜ್‌ಗೆ ನೀಡಿ ಪುನಶ್ಚೇತನಗೊಳಿಸುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಹುಮನಾಬಾದ್ ಕ್ಷೇತ್ರದ ಶಾಸಕರಾದ ಡಾ. ಸಿದ್ದು ಪಾಟೀಲ್ ಅವರು ಬೆಂಗಳೂರಿನಲ್ಲಿ ಸಕ್ಕರೆ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.
ಬಿಎಸ್‌ಎಸ್‌ಕೆ ಕಾರ್ಖಾನೆ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವುದರಿಂದ ಈ ಭಾಗದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಪುನರಾರಂಭಗೊಂಡರೆ ಬೀದರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕಬ್ಬು ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ದೊರೆಯುವುದರ ಜೊತೆಗೆ ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೆ, ಕಾರ್ಖಾನೆಯನ್ನು ಅವಲಂಬಿಸಿರುವ ಕಾರ್ಮಿಕರು ಹಾಗೂ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳು ದೊರೆಯಲಿವೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಹರಾಜು ಮಾಡುವ ಬದಲು ಸೂಕ್ತ ಸಂಸ್ಥೆಗೆ ಲೀಜ್ ಆಧಾರದ ಮೇಲೆ ನೀಡಿ ವೈಜ್ಞಾನಿಕ ಹಾಗೂ ಆರ್ಥಿಕವಾಗಿ ಪುನಶ್ಚೇತನಗೊಳಿಸುವುದು ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಸಚಿವರು, ಹರಾಜು ಪ್ರಕ್ರಿಯೆಗೆ ನಾಳೆಯೇ ತಡೆಯಾಜ್ಞೆ ನೀಡಿ, ಸೋಮವಾರ ಅಥವಾ ಮಂಗಳವಾರ ಬೀದರ್ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದು ಈ ಕುರಿತು ಸಮಗ್ರವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಿಎಸ್‌ಎಸ್‌ಕೆ ಪುನಶ್ಚೇತನಗೊಂಡರೆ ಕಬ್ಬು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರೆಯುವುದರ ಜೊತೆಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಇದರಿಂದ ಬೀದರ್ ಜಿಲ್ಲೆಯ ವ್ಯಾಪಾರ, ಸಾರಿಗೆ ಹಾಗೂ ಸಣ್ಣ ಕೈಗಾರಿಕೆಗಳು ಸೇರಿದಂತೆ ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ರೈತರು, ಕಾರ್ಮಿಕರು ಹಾಗೂ ಈ ಭಾಗದ ಆರ್ಥಿಕ ಹಿತದೃಷ್ಟಿಯಿಂದ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಶೀಘ್ರ ಪುನರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಡಾ. ಸಿದ್ದು ಪಾಟೀಲ್ ಅವರು ಮನವಿ ಮಾಡಿದ್ದಾರೆ.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading