1
1

ಬೀದರ: ಸಂಶೋಧನೆ ಎಂಬುದು ಕೇವಲ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಾಗದೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನವಾಗಬೇಕೆಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ವೀರೇಶ ಬಡಿಗೇರ ಪ್ರತಿಪಾದಿಸಿದರು.
ನಗರದ ಕರ್ನಾಟಕ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ “ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಯ ಸಾಧ್ಯತೆಗಳು” ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಸಂಶೋಧಕರು ಸರಿಯಾದ ಮಾರ್ಗದಲ್ಲಿ ಅಧ್ಯಯನ ಕೈಗೊಂಡು ಸತ್ಯದ ಶೋಧನೆ ಮಾಡುತ್ತ ಮುನ್ನಡೆಯಬೇಕು. ವಿವಿಧ ಮಾರ್ಗಗಳ ಮೂಲಕ ಸಂಶೋಧನೆಯ ವಿಭಿನ್ನ ಮುಖಗಳನ್ನು ಅನಾವರಣಗೊಳಿಸಬೇಕು. ಉತ್ತಮ ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡುವ ಮತ್ತು ಸ್ವತಂತ್ರವಾಗಿ ಅಭಿಪ್ರಾಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಇರಬೇಕು. ಸಂಶೋಧನೆ ಓದುಗರಿಗೆ ಪ್ರೇರಣೆ ಮತ್ತು ಸಂಶೋಧನಾ ಮನೋಭಾವ ಮೂಡಿಸುವಂತಿರಲಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ಧ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಮಾತನಾಡಿ ಸಂಶೋಧನೆಯು ಯಾವುದೇ ಪುಸ್ತಕದ ಪ್ರತಿಯಾಗದೆ ಸ್ವಂತ ಅಧ್ಯಯನ ಮಾಡಿ ಹೊಸತನವನ್ನು ಕಟ್ಟಿಕೊಡಬೇಕೆಂದು ಮಾರ್ಮಿಕವಾಗಿ ನುಡಿದರು.
ಪ್ರಾಚಾರ್ಯರಾದ ಪ್ರೊ. ಸೋಮನಾಥ ಬಿರಾದಾರ ಸ್ವಾಗತಿಸಿದರು. ಶಾಂತಕುಮಾರ ಅವರು ನಿರೂಪಿಸಿ ಅತಿಥಿ ಪರಿಚಯ ಮಾಡಿಕೊಟ್ಟರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದ ಮಡಕಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರದ ಮಾರ್ಗದರ್ಶಕರಾದ ಡಾ. ಲಕ್ಷ್ಮಿಕಾಂತ ಪಂಚಾಳ ಹಾಗೂ ಡಾ.ಅಶೋಕ ಕೋರೆ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.