1
1

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಗುರುನಾಥ ಜ್ಯಾಂತಿಕರ್ ಅವರು ಮಾತನಾಡಿ, ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಬೇಕಾದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಪಾರದರ್ಶಕ ಆಡಳಿತ ಹಾಗೂ ಆಡಳಿತ ಮಂಡಳಿ ದಿನನಿತ್ಯದ ವ್ಯವಹಾರಗಳ ಮೇಲೆ ನಿಗಾ ವಹಿಸುವುದು ಅತ್ಯವಶ್ಯಕ ಎಂದು ತಿಳಿಸಿದರು. ವಿವಿಧ ಉದಾಹರಣೆಗಳ ಮೂಲಕ ಮಾಹಿತಿ ನೀಡಿದ ಅವರು ಸಮಸ್ಯೆಗಳಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಕರೆ ನೀಡಿದರು. ಗುಣಾತ್ಮಕ ಸಹಕಾರಿಗಳಿಂದ ಮಾತ್ರ ಸದೃಢ ಮತ್ತು ಸಮರ್ಥ ಭಾರತದ ಅಭಿವೃದ್ಧಿ ಸಾಧ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರ್ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಿರ್ದೇಶಕರಾದ ನಾಗಶೆಟ್ಟಿ ಪಾಟೀಲ್ ವಹಿಸಿದ್ದರು. ಸಹಕಾರಿಗಳ ವ್ಯವಹಾರ ಅಭಿವೃದ್ಧಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಶ್ರೀಕಾಂತ ಸ್ವಾಮಿ ಸ್ವಾಗತ ಕೋರಿದರು. ಜಿಲ್ಲಾ ಸೌಹಾರ್ದ ಅಭಿವೃದ್ದಿ ಅಧಿಕಾರಿಯಾದ ರಾಜೇಶ್ ಕೆ.ಎಂ. ಅವರು ಕಾರ್ಯಕ್ರಮದ ಉಸ್ತುವಾರಿ ಹಾಗೂ ನಿರ್ವಹಣೆ ಮಾಡಿದರು. ಮುಖ್ಯ ಅತಿಥಿಯಾಗಿ ಸಂಜಯ್ ಕ್ಯಾಸಾ ಉಪಸ್ಥಿತರಿದ್ದರು. ಜಿಲ್ಲೆಯ 30 ಸೌಹಾರ್ದ ಸಹಕಾರಿಗಳಿಂದ ಸುಮಾರು 60 ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.
ಉಪನ್ಯಾಸಕರಾಗಿ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಶಶಿಧರ್ ಎಲೆ ಅವರು ನಷ್ಟದಲ್ಲಿರುವ ಸಹಕಾರಿಗಳ ಪ್ರಗತಿಗೆ ಅಗತ್ಯ ಮಾರ್ಗೋಪಾಯಗಳು, ಆದಾಯದ ಮೂಲಗಳು, ಸಂಪನ್ಮೂಲಗಳ ಸದ್ಬಳಕೆ, ವ್ಯವಹಾರ ಗಾತ್ರ ಹೆಚ್ಚಳ ಹಾಗೂ ತಂತ್ರಜ್ಞಾನ ಬಳಕೆ ಕುರಿತು ಉಪನ್ಯಾಸ ನೀಡಿದರು. ತರಬೇತುದಾರರಾದ ಡಾ. ಪೃಥ್ವೀರಾಜ್ ಲಕ್ಕಿ ಅವರು ಸಹಕಾರಿಗಳಲ್ಲಿ ಪ್ರೇರಣಾತ್ಮಕ ವಾತಾವರಣದ ಅಗತ್ಯತೆ ಕುರಿತು ಮಾತನಾಡಿದರು.
Subscribe to get the latest posts sent to your email.