1
1

ಬೀದರ್: ಬೀದರ್‌ನ ಯುವ ಕರಾಟೆ ಪಟು ಮೊಹಮ್ಮದ್ ಪರ್ವೇಜ್ ಖಾನ್ ಅವರು ಚೆನ್ನೈನಲ್ಲಿ ನಡೆದ ವಿಶ್ವ ಕರಾಟೆ ದಾಖಲೆ ಕಾರ್ಯಕ್ರಮದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ತಂಡದ ವ್ಯವಸ್ಥಾಪಕ ಡಾ.ಇಮ್ರಾನ್ ಸಯಿದ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಆಗಸ್ಟ್ ೧೬ರಂದು ಚೆನ್ನೈನ ಸೇಂಟ್ ಥಾಮಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ನಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ (Wಏಒಂ) ವತಿಯಿಂದ ಆಯೋಜಿಸಲಾದ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಒಂದೇ ಸಮಯದಲ್ಲಿ ಅತಿ ಹೆಚ್ಚು ಮಂದಿ ಕರಾಟೆ ಚಾಪ್ ಮಾಡುವ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದುಬೈ, ಅಂಡಮಾನ ಮತ್ತು ನಿಕೋಬಾರ್ ಸೇರಿದಂತೆ ವಿದೇಶದಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೮೦೦ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇವರಲ್ಲಿ ಕೇವಲ ೨೮ ಜನರಿಗೆ ವಿಶೇಷ ಪ್ರದರ್ಶನ ನೀಡುವ ಅವಕಾಶ ದೊರೆತಿದ್ದು, ಒಂದು ನಿಮಿಷದಲ್ಲಿ ೧೬೦ ಕರಾಟೆ ಚಾಪ್‌ಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸಾಮರ್ಥ್ಯ ಮೆರೆದರು. ಜೊತೆಗೆ, ಕೇವಲ ೩೦ ಸೆಕೆಂಡುಗಳಲ್ಲಿ ನಾಲ್ಕು ವಿಧದ ಪಂಚ್‌ಗಳು ಹಾಗೂ ಬ್ಲಾಕ್‌ಗಳನ್ನು ಪ್ರದರ್ಶಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಚ್ ಆದ ಸುವಿತ ಮೋರೆ ಮಾತನಾಡಿ, ಪರ್ವೆಜ್ ಖಾನ್ ಅವರ ಸಾಧನೆಯನ್ನು ಗುರುತಿಸಿ Wಏಒಂ ವತಿಯಿಂದ Wಖ-೦೨೯೦೭ ಸಂಖ್ಯೆಯ ವಿಶ್ವ ದಾಖಲೆ ಗೌರವ ಪ್ರಮಾಣ ಪತ್ರ ಹಾಗೂ ಪದಕವನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವ ದಾಖಲೆ ನಿರ್ದೇಶಕ ಪ್ರವೀಣ್ ರಾಣೆ ಸೇರಿದಂತೆ ಆಯೋಜಕರು ವಿಜೇತರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ಮೋರೆ ಹೇಳಿದರು.
ಸ್ವತಃ ಪರ್ವೆಜ್ ಖಾನ್ ಈ ಸಂದರ್ಭದಲ್ಲಿ ಮಾತನಾಡಿ, ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಅರಿವು ಮೂಡಿಸುವುದು ಈ ಕರಾಟೆ ಸ್ಪರ್ಧೆಯ ಮೂಲ ಉದ್ದೇಶವಾಗಿತ್ತು. ಕಠಿಣ ಪರಿಶ್ರಮ, ಶಿಸ್ತು ಹಾಗೂ ದೃಢಸಂಕಲ್ಪದ ಫಲದಿಂದ ಗಿನ್ನಿಸ್ ದಾಖಲೆ ನಿರ್ಮಿಸಲು ತನಗೆ ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸಿರುವ ಅವರು, ಮೊಬೈಲ್ ಗೇಮ್‌ಗೆ ಮಾರು ಹೋಗಿ ಆರೋಗ್ಯ ಹಾಗೂ ಮಾನಸಿಕವಾಗಿ ದುರ್ಬಲರಾಗುತ್ತಿರುವ ಯುವ ಸಮುಹ ಕರಾಟೆ, ಕ್ರೀಡೆ, ವ್ಯಾಯಾಮ ಇತ್ಯಾದಿಗಳಲ್ಲಿ ಭಾಗವಹಿಸಿದರೆ ಸಧೃಢ ಹಾಗೂ ಶ್ರೇಷ್ಠ ಜೀವನ ನಡೆಸಬಹುದಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ನವಾಜ್ ಖಾನ್, ಕ್ರೀಡಾ ವಿಭಾಗದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಾಜ್ ಪಟೇಲ್, ಸಂದೀಪಕುಮಾರ, ಸುಮಿತ, ಪ್ರಭಾಕರ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
Subscribe to get the latest posts sent to your email.