1
1

ಬೀದರ್: ಯಾವುದೇ ಪ್ರಾಣಿ ಕಚ್ಚಿದರೆ ಮಕ್ಕಳು ಕೂಡಲೇ ಪಾಲಕರ ಗಮನಕ್ಕೆ ತರಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಮುದ್ರ ಕುಲಕರ್ಣಿ ಹೇಳಿದರು.
ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಇಲ್ಲಿಯ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರೇಬಿಸ್ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಾಣಿಯಿಂದ ಮನುಷ್ಯನಿಗೆ ಹರಡುವ ರೇಬಿಸ್ ಮಾರಣಾಂತಿಕ ರೋಗವಾಗಿದೆ. ಹೀಗಾಗಿ ಈ ರೋಗದ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸೋಂಕಿನಿಂದ ಬಳಲುತ್ತಿರುವ ಪ್ರಾಣಿ ಇನ್ನೊಂದು ಪ್ರಾಣಿ ಇಲ್ಲವೇ ಮನುಷ್ಯನಿಗೆ ಪರಚಿದರೆ ಅಥವಾ ಕಚ್ಚಿದರೆ ರೋಗ ಹರಡುತ್ತದೆ. ಪ್ರಾಣಿಯ ಜೊಲ್ಲು ಪ್ರಾಣಿ ಮತ್ತು ಮನುಷ್ಯನ ಲೋಳೆ ಪೊರೆ ಸಂಪರ್ಕಕ್ಕೆ ಬಂದರೂ ರೋಗ ವರ್ಗಾವಣೆಯಾಗುತ್ತದೆ ಎಂದು ಹೇಳಿದರು.
ತಲೆ ನೋವು, ಜ್ವರ, ವಾಕರಿಗೆ ಅತಿಯಾಗಿ ಜೊಲ್ಲು ಸೋರುವುದು, ನುಂಗಲು ಕಷ್ಟವಾಗುವುದು. ನೀರು ಕಂಡರೆ ಭಯಪಡುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗ ಲಕ್ಷಣಗಳು ಗೋಚರಿಸಲು ಮೂರು ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದರು.
ಶಂಕಿತ ರೇಬಿಸ್ ರೋಗ ಪೀಡಿತ ಪ್ರಾಣಿ ಕಚ್ಚಿದರೆ 0,3,7,14 ಹಾಗೂ 28ನೇ ದಿನ ರೇಬಿಸ್ ರೋಗ ನಿರೋಧಕ ಚುಚ್ಚು ಮದ್ದು ತೆಗೆದುಕೊಳ್ಳಬೇಕು. 90 ದಿನಗಳ ಒಳಗೆ ಒಂದು ಚುಚ್ಚು ಮದ್ದು ಹಾಗೂ ಟೆಟ್ನಸ್ ಟಾಕ್ಸೈಡ್ ಇಂಜಕ್ಷನ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರಾಣಿ ಸಂತಾನ ನಿಯಂತ್ರಣ ಕಾಯ್ದೆ 2023 ಅನ್ನು ತಪ್ಪದೆ ಪಾಲಿಸಬೇಕು ಎಂದು ಸಲಹೆ ಮಾಡಿದರು.
ಕಾಲೇಜು ಪ್ರಾಚಾರ್ಯ ಸೋಮನಾಥ ಬಿರಾದಾರ, ಗ್ರಂಥಪಾಲಕ ಡಾ. ಸೋಮನಾಥ ಮುದ್ದಾ, ಡಾ. ದಿಲೀಪ್ ಮಾಲೆ ಉಪಸ್ಥಿತರಿದ್ದರು.