Popular Posts

ನದಿಗೆ ರಾಸಾಯನಿಕ ತ್ಯಾಜ್ಯ : 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು, ಆ.10: ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಗುರುಗಂಗಾ, ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಯ ಬಿಡುತ್ತಿರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಕೂಡಲೇ 3 ಕೈಗಾರಿಕೆ ಮುಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲೆ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಮೆ.6H ಇಂಡಸ್ಟ್ರೀಸ್, ಮೆ. ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ. ಹಿಮಾಲಯ  ಕೈಗಾರಿಕೆಗಳಿಗೆ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವ ಆದೇಶ (ಕ್ಲೋಷರ್ ಆರ್ಡರ್) ಹೊರಡಿಸಿ, ಅನುಸರಣಾ ವರದಿಯನ್ನು 24 ಗಂಟೆಯೊಳಗಾಗಿ ಈ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.
ಮಾಣಿಕನಗರದ ಹಳ್ಳಕ್ಕೆ, ಗುರುಗಂಗಾ ಮತ್ತು ಮಾಂಜ್ರಾ ನದಿಗಳಿಗೆ ಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಂದ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವ ಕಾರಣ ನದಿ ಕಲುಷಿತವಾಗಿ ಗಬ್ಬುವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಜನ, ಜಾನುವಾರುಗಳಿಗೆ ಮಾರಕವಾದ ಕಾಯಿಲೆಗಳು ಬರುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದು “ಗುರುಗಂಗಾ ಉಳಿಸಿ” ಎಂದು ಸಾರ್ವಜನಿಕರು ಜಾಥಾ, ಸಭೆ, ಪ್ರತಿಭಟನೆ ಹಾಗೂ ಅಭಿಯಾನ ಆರಂಭಿಸಿದ್ದಾರೆ ಎಂದೂ ತಮ್ಮ ಲಿಖಿತ ಸೂಚನೆಯಲ್ಲಿ ತಿಳಿಸಿದ್ದಾರೆ.
ಈ ಹಳ್ಳದ ನೀರು ಕಾರಂಜಾ ಹಿನ್ನೀರು ಸೇರುವ ಕಾರಣ ಕುಡಿಯುವ ನೀರು ಕಲುಷಿತವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಆಗುತ್ತದೆ. ಈ ಹಿನ್ನೆಲೆಯಲ್ಲಿ ತತ್ ಕ್ಷಣವೇ ಈ ಮಾಲಿನ್ಯಕಾರಕ ಕೈಗಾರಿಕೆಗಳನ್ನು ಜಲ ಮೂಲಗಳ ಸಂರಕ್ಷಣೆಯ ಹಿತದೃಷ್ಟಿಯಿಂದ, ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ.ಎನ್.ಎಸ್.ಎಸ್.) 2023ರ  ಸೆಕ್ಷನ್ 152ರಡಿಯಲ್ಲಿ ಸಾರ್ವಜನಿಕ ಉಪದ್ವ್ಯಾಪ (public nuisance) ತಡೆಯಲು ತುರ್ತು ಕ್ರಮ ವಹಿಸುವ ಅಗತ್ಯ  ಮನಗಾಣಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ  ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವನಾಗಿ ನಾನು, ದಿನಾಂಕ 05.08.2026ರಂದು ಟಿಪ್ಪಣಿ ಸಂಖ್ಯೆ ಗ್ರಾ.ಅ.ಪಂ.ರಾ/326/2026ರಲ್ಲಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿ  ಈ ಭಾಗದ ನೀರಿನ ಪರೀಕ್ಷೆ ಮಾಡಿಸಿ, ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಿ, ಜಲ ಮೂಲ ಸಂರಕ್ಷಿಸಲು ಮತ್ತು 48 ಗಂಟೆಗಳ ಒಳಗಾಗಿ ಕೈಗೊಂಡ ಕ್ರಮದ ವರದಿ ಸಲ್ಲಿಸಲು ಸೂಚನೆ ನೀಡಲಾಗಿರುತ್ತದೆ ಎಂಬುದನ್ನು ಸ್ಮರಿಸಿದ್ದಾರೆ.
ಈ ಹಿಂದೆ ತಾವೇ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿದ್ದಾಗ, ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ 20204ರ ಜುಲೈ 29ರಂದು  ಮಾಲಿನ್ಯ ಹರಡುತ್ತಿದ್ದ 9 ಕೈಗಾರಿಕೆಗಳನ್ನು ಸೀಜ್ ಮಾಡಲು ಹುಮನಾಬಾದ್ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರೂ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೆ ಈ ಕೈಗಾರಿಕೆಗಳು ಕಾರ್ಯಾಚರಣೆ ಮಾಡಿದ್ದು, ಕೈಗಾರಿಕಾ ತ್ಯಾಜ್ಯ ಜಲ ಮೂಲಗಳನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತವಾಗುತ್ತಿರುವ ಕಾರಣ ಜಲ, ಪರಿಸರ ಸಂರಕ್ಷಣೆ, ಸಾರ್ವಜನಿಕರ ಹಿತದೃಷ್ಟಿ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading