ಬೀದರ್ :-ಜಿಲ್ಲಾ ಕೇಂದ್ರ ಬೀದರ್‌ನಿಂದ ನೂತನ ತಾಲೂಕು ಕೇಂದ್ರವಾದ ಚಿಟಗುಪ್ಪಕ್ಕೆ ಮನ್ನಾಎಖೆಳ್ಳಿ ಮಾರ್ಗವಾಗಿ ನೇರ ಎಕ್ಸ್ಪ್ರೆಸ್ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ಶ್ರೀ ವೀರಭದ್ರಪ್ಪ ಉಪ್ಪಿನ್ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ.
ಬೀದರ್‌ನಿಂದ ಚಿಟಗುಪ್ಪಕ್ಕೆ ಸುಮಾರು 50 ಕಿ.ಮೀ ದೂರವಿದ್ದು, ಸದ್ಯ ಕೇವಲ ಸಾಮಾನ್ಯ (ಸಾದಾ) ಬಸ್ಸುಗಳ ಸೌಲಭ್ಯ ಮಾತ್ರವಿದೆ. ಇದರಿಂದಾಗಿ ಪ್ರಯಾಣಿಕರು ತಲುಪಲು 2 ಗಂಟೆಗೂ ಅಧಿಕ ಸಮಯ ವ್ಯಯಿಸಬೇಕಾಗುತ್ತಿದೆ. ಬೀದರ್‌ನಿಂದ ಮನ್ನಾಎಖೆಳ್ಳಿವರೆಗೆ ಎಕ್ಸ್ಪ್ರೆಸ್ ಬಸ್ಸುಗಳಿದ್ದರೂ, ಅಲ್ಲಿಂದ ಮುಂದೆ ಚಿಟಗುಪ್ಪಕ್ಕೆ ಹೋಗಲು ಮತ್ತೆ ಸಾಮಾನ್ಯ ಬಸ್ಸುಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.
ಜಿಲ್ಲೆಯ ಉಳಿದ ತಾಲೂಕು ಕೇಂದ್ರಗಳಾದ ಭಾಲ್ಕಿ, ಔರಾದ್, ಬಸವಕಲ್ಯಾಣ, ಹುಮನಾಬಾದ್, ಹುಲಸೂರು ಹಾಗೂ ಕಮಾಲ್ ನಗರಗಳಿಗೆ ಬೀದರ್‌ನಿಂದ ನೇರ ಎಕ್ಸ್ಪ್ರೆಸ್ ಬಸ್ ಸೌಲಭ್ಯವಿದೆ. ಆದರೆ ಚಿಟಗುಪ್ಪ ತಾಲೂಕು ಮಾತ್ರ ಈ ಸೌಲಭ್ಯದಿಂದ ವಂಚಿತವಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಬೀದರ್-ಬಗದಲ-ಮನ್ನಾಎಖೆಳ್ಳಿ-ಶಾಮತಾಬಾದ್ ಮಾರ್ಗವಾಗಿ ಚಿಟಗುಪ್ಪಕ್ಕೆ ತಡೆರಹಿತ ಅಥವಾ ಎಕ್ಸ್ಪ್ರೆಸ್ ಬಸ್ಸುಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿ, ಕಲಬುರಗಿ ಕೇಂದ್ರ ಕಚೇರಿಯ ಕಲ್ಯಾಣ ಅಧಿಕಾರಿಗಳಾದ ಶ್ರೀ ಪ್ರಭುಲಿಂಗ ಸ್ವಾಮಿ ಅವರಿಗೆ ಬೀದರ್ ಬಸ್ ನಿಲ್ದಾಣದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗಶೆಟ್ಟಿ, ನವೀನ್ ಹಾಗೂ ಇತರರು ಉಪಸ್ಥಿತರಿದ್ದರು