ಔರಾದ(ಬಿ) ತಾಲ್ಲೂಕಿನ ಘಮಸುಬಾಯಿ ತಾಂಡಾ ಬೋಂತಿಯಲ್ಲಿ ನಡೆದ ಇಚ್ಛಾಪೂರ್ತಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದ ಕೊನೆಯ ದಿನ ಗುರುವಾರ ಕುಸ್ತಿ ಪಂದ್ಯಾವಳಿ ಭಾರೀ ಉತ್ಸಾಹ ಮತ್ತು ಸಂಭ್ರಮದೊಂದಿಗೆ ನಡೆಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ ನೂರಾರು ಕುಸ್ತಿಪಟುಗಳು ಅಖಾಡಕ್ಕಿಳಿದು ರೋಚಕ ಪೈಪೋಟಿ ನಡೆಸಿದರು. ಪ್ರತಿಯೊಂದು ಕುಸ್ತಿಯೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತು. ಗೆದ್ದ ಕುಸ್ತಿಪಟುಗಳಿಗೆ ಶಾಲು ಹೊದಿಸಿ, ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಶಾಸಕರು ಅಭಿನಂದಿಸಿದರು.
ಕುಸ್ತಿಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು, ಕುಸ್ತಿ ಎಂಬುದು ಕೇವಲ ಕ್ರೀಡೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿದ್ದು, ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ದೃಢತೆಗೆ ಪ್ರೇರಣೆಯಾಗುತ್ತದೆ. ಶಿಸ್ತು, ಸಾಹಸ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಗ್ರಾಮೀಣ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಕುಸ್ತಿ ಆಯೋಜಿಸಲಾಗುತ್ತಿದೆ. ಸ್ಥಳೀಯ ಕುಸ್ತಿಪಟುಗಳಲ್ಲದೇ ಹೊರ ರಾಜ್ಯಗಳಿಂದಲೂ ಆಟಗಾರರು ಆಗಮಿಸುತ್ತಿರುವುದು ಸಂತೊಷ ತಂದಿದೆ ಎಂದರು.
ಗ್ರಾಮೀಣ ಭಾಗಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸುವ ಮೂಲಕ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುತ್ತದೆ. ನಾನು ಶಿಕ್ಷಣದ ಜೊತೆಗೆ ಕ್ರೀಡೆಗಳ ಅಭಿವೃದ್ಧಿಗೂ ಒತ್ತು ಕೊಟ್ಟಿದ್ದು, ಔರಾದನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ವಿಶೇಷವಾಗಿ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಸರ್ಕಾರಕ್ಕೆ ನಿರಂತರವಾಗಿ ಆಗ್ರಹಿಸುತ್ತಾ ಬರುತ್ತಿದ್ದೇನೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ದ. ಯುವಕರು ಕೂಡ ಮೊಬೈಲ್ ಹಾಗೂ ಅನಾರೋಗ್ಯಕರ ಚಟಗಳಿಂದ ದೂರವಿದ್ದು ಇಂತಹ ಪರಂಪರೆಯ ಕ್ರೀಡೆಗಳತ್ತ ಆಸಕ್ತಿ ತೋರಬೇಕು ಎಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ಅಣ್ಣಾರಾವ ರಾಠೋಡ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ, ಕೇರಬಾ ಪವಾರ, ಜಗನ್ನಾಥ ಚಿಟಮೆ, ಅನೀಲ ಬಿರಾದಾರ, ಮಾರುತಿ ಪವಾರ, ಜಾಖೇರ್ ಶೇಖ್, ಸಂಜು ಒಡೆಯರ್, ಶಿವರಾಜ ಅಲ್ಮಾಜೆ, ಪ್ರತೀಕ ಚವ್ಹಾಣ, ಪ್ರಕಾಶ ಅಲ್ಮಾಜೆ, ಸುಜಿತ ರಾಠೋಡ ಮಹಾದೇವ ಅಲ್ಮಾಜೆ, ಯೋಗೇಶ ಪಟೇಲ, ಉಮಾಕಾಂತ ಸಿಗ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಂಬಾದಾಸ ನೇಳಗೆ ನಿರೂಪಿಸಿದರು.
Related