Popular Posts

ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದನಾ ಸಮಾರಂಭ: ಸೋಮಶೇಖರ ಬಿರಾದಾರ ಚಿದ್ರಿ

ಬೀದರ್, ಫೆ.17:  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದನಾ ಸಮಾರಂಭವನ್ನು ಇಂದು ಸಂಜೆ ೫:೩೦ ಗಂಟೆಗೆ ಬೀದರ್ ನಗರದ ಮ್ಯಾಸ್ಟಿಫ್ ಸೆಲೆಕ್ಟ್ (ವೈಬ್) ಹೋಟೆಲ್‌ನಲ್ಲಿ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು,  ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಅಭೂತಪೂರ್ವ ಜಯ ಸಾಧಿಸಿರುವ ಸಿ.ಎಸ್. ಷಡಾಕ್ಷರಿ ಅವರು, ಪ್ರಪ್ರಥಮ ಬಾರಿಗೆ ಶರಣರ ನಾಡು ಬೀದರ್ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ತಮ್ಮ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಸರಕಾರಿ ನೌಕರರ ಪರವಾಗಿ ಸುಮಾರು ೨೫ರಿಂದ ೩೦ ಆದೇಶಗಳನ್ನು ಸರ್ಕಾರದಿಂದ ಹೊರಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.
ಮಹಿಳಾ ನೌಕರರ ಹಿತಕ್ಕಾಗಿ ‘ಕೆ.ಎ.ಎಸ್.ಎಸ್ ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಯಡಿ ತಿಂಗಳಿಗೆ ಒಂದು ದಿನದ ಋತುಚಕ್ರ ರಜೆ ಮಂಜೂರು ಮಾಡಿಸುವಲ್ಲಿ ರಾಜ್ಯಾಧ್ಯಕ್ಷರು ಕೀರ್ತಿಸಾಧನೆ ಮಾಡಿದ್ದಾರೆ ಎಂದರು.
ಇಂದು ಮುಂಜಾನೆ ೭:೩೦ ಗಂಟೆಗೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಭಾಲ್ಕಿ ಕಚೇರಿಗೆ ತೆರಳಿ ಬೆಳಿಗ್ಗೆ ೧೦ ಗಂಟೆಗೆ ಭೇಟಿ ನೀಡಲಿದ್ದಾರೆ. ಬಳಿಕ ೧೦:೩೦ಕ್ಕೆ ಹುಲಸೂರ ನೌಕರರ ಸಂಘದ ಕಚೇರಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಬಳಿಕ ಸಂಜೆ ೪ ಗಂಟೆಗೆ ಭಾಲ್ಕಿಯಿಂದ ತೆರಳಿ ೫ ಗಂಟೆಗೆ ಬೀದರ್ ಆಗಮಿಸಲಿದ್ದಾರೆ. ಮ್ಯಾಸ್ಟಿಫ್ ಸೆಲೆಕ್ಟ್ ಹೋಟೆಲ್‌ನ ಮುಖ್ಯದ್ವಾರದಿಂದ ಅಭಿನಂದನಾ ಸಮಾರಂಭದ ವೇದಿಕೆಯವರೆಗೆ ತೆರೆದ ವಾಹನದಲ್ಲಿ ಕಲಾತಂಡಗಳೊAದಿಗೆ ಮೆರವಣಿಗೆ ಮೂಲಕ ಭವ್ಯ ಸ್ವಾಗತ ನೀಡಲಾಗುವುದು.
ಕಾರ್ಯಕ್ರಮಕ್ಕೆ ಅನುಭವ ಮಂಟಪ ಬಸವಕಲ್ಯಾಣ ಅಧ್ಯಕ್ಷರಾದ ಪೂಜ್ಯ  ನಾಡೋಜ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಲೋಕಸಭಾ ಸದಸ್ಯರಾದ ಸನ್ಮಾ ಸಾಗರ ಈ. ಖಂಡ್ರೆ ಉದ್ಘಾಟಿಸಲಿದ್ದಾರೆ. ಔರಾದ್ (ಬಿ) ಕ್ಷೇತ್ರದ ಶಾಸಕ  ಪ್ರಭು ಚವ್ಹಾಣ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ತಾನು ಅಧ್ಯಕ್ಷತೆ ವಹಿಸುವುದಾಗಿ ಹೇಳಿದರು.
ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ವಿವಿಧ ಇಲಾಖೆಗಳ ನಿರ್ದೇಶಕರು, ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಬೀದರ್ ಜಿಲ್ಲೆಯ ವಿವಿಧ ವೃಂದ ಸಂಘಗಳಿAದ ಸುಮಾರು ೨೦೦೦ಕ್ಕೂ ಹೆಚ್ಚು ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿದ್ರಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ರಾಜಕುಮಾರ ಮಾಳಗೆ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಎನ್‌ಪಿಎಸ್ ಯೋಜನೆ ಕೈ ಬಿಟ್ಟು ಒ ಪಿ ಎಸ್ ಯೋಜನೆ ಜಾರಿಗೊಳಿಸಬೇಕೆಂದು ನಮ್ಮ ರಾಜ್ಯ ಅಧ್ಯಕ್ಷರ ಮೂಲಕ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆದರೂ ಅದು ಇಲ್ಲಿಯ ವರೆಗೆ ಬಗೆಹರಿಯಲಿಲ್ಲ. ಈಗ ರಾಜ್ಯಾಧ್ಯಕ್ಷರು ಆಗಮಿಸುತ್ತಿದ್ದು ಮತ್ತೊಮ್ಮೆ ಅವರ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು, ಜೊತೆಗೆ ಈಗಿರುವ ಆರೋಗ್ಯ ಸಂಜೀವಿನಿಯು ಹಿಂದೆ ಜ್ಯೋತಿ ಸಂಜೀವಿನಿ ಮಾದರಿಯಲ್ಲಿ ಪಕ್ಕದ ತೆಲಂಗಾಣ ರಾಜ್ಯದ ಹೈದರಾಬಾದ್ ಹಾಗೂ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಗಳಿಗೆ ಚಿಕಿತ್ಸೆಗಾಗಿ ಈ ಯೋಜನೆಯನ್ನು ವಿಸ್ತರಿಸುವಂತೆ ಸಹ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದೆಂದು ಮಾಳಿಗೆ ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾವೆ, ಖಜಾಂಚಿ ದೇವಪ್ಪ ಚಂಬುಳೆ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಉಪಾಧ್ಯಕ್ಷರಾದ ಗೌತಮ ಚಿಂತಲಗೇರಾ, ಎಮ್.ಎಸ್ ಸತ್ತಾರ್, ಗೌರವ ಸಲಹೆಗಾರ ದಿಲೀಪ ಡೋಂಗ್ರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!