1
1

ಬೀದರ್: ಸರ್ಕಾರಿ ಶಾಲೆಗಳ 2026-27ನೇ ಸಾಲಿನ ಪಠ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪುಸ್ತಕದ ಬದಲು ಮೌಲ್ಯ ಶಿಕ್ಷಣ ಪುಸ್ತಕ ಅಳವಡಿಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತೀವ್ರ ಅತೃಪ್ತಿ ಹೊರ ಹಾಕಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಶನಿವಾರ ಕಚೇರಿ ಅಧೀಕ್ಷಕರಿಗೆ ಸಲ್ಲಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ 1 ರಿಂದ 10ನೇ ತರಗತಿ ಮಕ್ಕಳಿಗೆ ದೈಹಿಕ ಶಿಕ್ಷಣ ಪಠ್ಯ ವಸ್ತು ಒಳಗೊಂಡ ಮೌಲ್ಯ ಶಿಕ್ಷಣ ಹೆಸರಿನ ಪುಸ್ತಕ ಮುದ್ರಿಸಿ ವಿತರಿಸಲು ಆದೇಶಿಸಿದೆ. ಇದರಿಂದ ದೈಹಿಕ ಶಿಕ್ಷಣ ವಿಷಯವನ್ನೇ ಮೌಲ್ಯ ಶಿಕ್ಷಣವಾಗಿ ಮಾರ್ಪಡಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಬಿ. ಸೂರ್ಯವಂಶಿ ಹೇಳಿದರು.
ಪ್ರೊ.ಎಲ್.ಆರ್. ವೈದ್ಯನಾಥನ್ ಸಮಿತಿಯು 1 ರಿಂದ 10 ನೇ ತರಗತಿ ವರೆಗೆ ದೈಹಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು 2006 ರಲ್ಲಿ ನೀಡಿದ ವರದಿ ಪರಿಣಾಮ ಧಾರವಾಡದ ಡಾ. ಆನಂದ ನಾಡಗೇರ್ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ರಚಿಸಲಾಗಿತ್ತು. ಬಳಿಕ 6 ರಿಂದ 10ನೇ ತರಗತಿ ವರೆಗೆ ದೈಹಿಕ ಶಿಕ್ಷಣ ಪುಸ್ತಕ ರಚಿಸಿ ಪ್ರತಿ ವರ್ಷ ಶಾಲೆಗಳಿಗೆ ಸರಬರಾಜು ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು.
ಇದೀಗ ಏಕಾಏಕಿ ದೈಹಿಕ ಶಿಕ್ಷಣದ ಅಂಶಗಳನ್ನು ಮೌಲ್ಯ ಶಿಕ್ಷಣ ಪುಸ್ತಕದಲ್ಲಿ ಸೇರಿಸುತ್ತಿರುವುದು ದೈಹಿಕ ಶಿಕ್ಷಕರಲ್ಲಿ ಆತಂಕ ಹಾಗೂ ಗೊಂದಲ ಉಂಟು ಮಾಡಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಪುಸ್ತಕವು ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆ ಜತೆಗೆ ಕ್ರೀಡಾ ಸಾಧನೆಗೆ ಅವಶ್ಯಕವಾದ ಅಂಶಗಳನ್ನು ಒಳಗೊಂಡಿದೆ. ಕಾರಣ, ದೈಹಿಕ ಶಿಕ್ಷಣ ಅಂಶವನ್ನು ಬೇರೆ ಪುಸ್ತಕದಲ್ಲಿ ಸೇರ್ಪಡೆಗೊಳಿಸದೆ, ದೈಹಿಕ ಶಿಕ್ಷಣ ಪುಸ್ತಕದಲ್ಲೇ ಮೌಲ್ಯ ಶಿಕ್ಷಣ ಸೇರಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಡೊಂಬಾಳೆ, ಖಜಾಂಚಿ ಸಂಜಯ್ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮಾಜಿದ್ ಅಲಿ, ಜಂಟಿ ಕಾರ್ಯದರ್ಶಿ ಸುಧಾಕರ್ ಪೋಲಕಪಳ್ಳಿ, ಬೀದರ್ ತಾಲ್ಲೂಕು ಅಧ್ಯಕ್ಷ ಕ್ಲೆಮೆಂಟ್‍ರಾಜ್, ಉಪಾಧ್ಯಕ್ಷ ವಿಜಯಕುಮಾರ ಮಹೀಂದ್ರಕರ್, ಪ್ರಧಾನ ಕಾರ್ಯದರ್ಶಿ ಹಾಜಿಸಾಬ್, ಸಂಘಟನಾ ಕಾರ್ಯದರ್ಶಿ ಗೀತಾ ನಾರಾ, ಜಂಟಿ ಕಾರ್ಯದರ್ಶಿ ಗೋಪಾಲ್ ರೆಡ್ಡಿ, ಲಲಿತಾ, ಶಂಕರರಾವ್ ಪಾಟೀಲ, ಎಂ.ಡಿ. ಶಹಾಬುದ್ದೀನ್, ಶಿವಕುಮಾರ ಖಿಂಡಿ, ಹರಿಪ್ರಸಾದ್ ಕುಲಕರ್ಣಿ ಇದ್ದರು.