1
1

ಕಲಬುರಗಿ,ಫೆ.24.-ಉಚಿತ ಕಂಪ್ಯೂಟರ್ ತರಬೇತಿ ಪಡೆದಿರುವ ಕಾರಾಗೃಹದ ಕೈದಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ನೂತನ ತರಬೇತಿದಾರರಿಗೆ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಸೋಮವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು.
ಈ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡಗಂಚಿ ಶಾಖೆಯ ಕಾರ್ಮಲ್ ಜ್ಯೋತಿ ಪಬ್ಲೀಕ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಫಾದರ್ ವಿಲಿಯಂ ಮಿರಿಂಡಾ ಅವರು, ಕೈದಿಗಳ ಜೀವನ ಸುಧಾರಣೆಗೋಸ್ಕರ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಈ ಕಂಪ್ಯೂಟರ್ ತರಬೇತಿಯ ಲಾಭ ಪಡೆಯಬೇಕು ಎಂದರು. ಅದಾನಿ ಗ್ರೂಪ್ನ ಸಂಯೋಜಕ ಅಶೋಕ ಬಿ ಹಾಲವಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮಹತ್ವ ಪಡೆದಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಉಚಿತ ಕಂಪ್ಯೂಟರ್ ತರಬೇತಿ ಪಡೆದಿರುವ ಕಾರಾಗೃಹದ ಕೈದಿಗಳಿಗೆ ಪ್ರಮಾಣಪತ್ರ ಹಾಗೂ ನೂತನ ತರಬೇತಿದಾರರಿಗೆ ಕಿಟ್ ವಿತರಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರು, ಕಾರಾಗೃಹದಲ್ಲಿರುವ ಎಲ್ಲಾ ಬಂದಿಗಳಿಗೆ ಸರದಿ ಪ್ರಕಾರವಾಗಿ ಕಂಪ್ಯೂಟರ್ ಶಿಕ್ಷಣ ನೀಡುವುದರ ಜೊತೆಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ಸಹ ನೀಡಲಾಗುತ್ತದೆ. ಪ್ರತಿಯೊಬ್ಬ ಬಂದಿಯು ವೃತ್ತಪರ ತರಬೇತಿಗಳನ್ನು ಪಡೆದು ಹಾಗೂ ತರಬೇತಿ ಪಡೆದಿರುವ ಬಂದಿಗಳಿಗೆ ವಿಶೇಷ ಮಾಫಿಯನ್ನು ನೀಡಲಾಗುವುದು ಅದರ ಉಪಯೋಗ ಪಡೆದುಕೊಂಡು ಈ ಕಾರಾಗೃಹದಿಂದ ಬಿಡುಗಡೆ ಹೊಂದಿ ಉತ್ತಮ ಬಾಳ್ವೆ ನಡೆಸಿ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕೆಂದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 30 ಜನ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ 30 ಜನ ನೂತನ ಪ್ರಶಿಕ್ಷಣಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ, ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗ್ಲ್ ಹಾಗೂ ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಉಪಸ್ಥಿತರಿದ್ದರು.
ಕಾರಾಗೃಹದ ಶಿಕ್ಷಕರಾದ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ ವಂದಿಸಿದರು.