1
1

ಬೀದರ್, ಆ.10: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ರೈತರ ಎಲ್ಲ ವಿಧದ ಸಾಲಗಳನ್ನು ಮನ್ನಾ ಮಾಡಬೇಕು ಹಾಗೂ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಘಟಕ ಬೀದರ್ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಸೋಮವಾರ ಬೀದರ್ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ರೈತರು, ಕಾರ್ಮಿಕರು ಹಾಗೂ ಕೃಷಿ ಕೂಲಿಕಾರ್ಮಿಕರ ವಿವಿಧ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಆಗ್ರಹಿಸಿವೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಭೆ ಜುಲೈ 28ರಂದು ದೆಹಲಿಯಲ್ಲಿ ನಡೆದಿದ್ದು, ರೈತರು ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ರೈತರ ಸಾಲ ಮನ್ನಾ ಮಾಡಿ
ಬೀದರ್ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ. ರೈತರು ಬೀಜ, ರಸಗೊಬ್ಬರ, ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚನ್ನೂ ಮರಳಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗಾಗಿ ಸಾಲ ಪಡೆದ ರೈತರು ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.
ಎಸ್ಬಿಐ ಸೇರಿದಂತೆ ವಿವಿಧ ಬ್ಯಾಂಕ್ಗಳು ರೈತರಿಗೆ ಸಾಲ ಮರುಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡುತ್ತಿದ್ದು, ಸರ್ಫೇಸಿ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಚೊಂಡಿ ಗ್ರಾಮದ ಮಾಣಿಕಪ್ಪ ಸೈಬಣ್ಣ, ಕಂಟೆಪ್ಪ ಸಿದ್ಧಪ್ಪ, ನೀಲಮ್ಮ ಮೇತ್ರೆ, ಜಗದೀಶ್ವರ ಸೈಬಣ್ಣ, ವೈಜಿನಾಥ ಚೊಂಡಿ ಹಾಗೂ ರಾಚಮ್ಮ ಕಂಟೆಪ್ಪ ಸೇರಿದಂತೆ ರೈತರಿಗೆ ನೀಡಿರುವ ನೋಟಿಸ್ಗಳನ್ನು ಹಿಂಪಡೆಯಬೇಕು ಮತ್ತು ಅವರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ತಮಿಳುನಾಡು ಸರ್ಕಾರದ ಮಾದರಿಯಲ್ಲಿ ರಾಜ್ಯದ ರೈತರ ಎಲ್ಲ ವಿಧದ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೆಳೆ ನಷ್ಟಕ್ಕೆ ₹50 ಸಾವಿರ ಪರಿಹಾರ
ಮಳೆ ಕೊರತೆಯಿಂದ ಉಂಟಾಗಿರುವ ಬರಗಾಲ ಪರಿಸ್ಥಿತಿಯನ್ನು ಪರಿಗಣಿಸಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಬ್ಯಾಂಕ್ಗಳು ರೈತರಿಗೆ ಡಿಮ್ಯಾಂಡ್ ನೋಟಿಸ್ ನೀಡಿ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಅದೇ ರೀತಿ ಬಗರ್ಹುಕುಂ ಸಾಗುವಳಿದಾರರಿಗೆ ‘ಸಿ’ ಫಾರಂ ನೀಡಬೇಕು. ಫಾರಂ ನಂ.57ರ ಅರ್ಜಿಗಳನ್ನು ಸ್ವೀಕರಿಸಲು ರಾಜ್ಯದ ಎಲ್ಲ ತಹಸೀಲ್ದಾರರಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ಒತ್ತಾಯ
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕಾರ್ಮಿಕ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ರಾಜ್ಯ ಸರ್ಕಾರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ ₹24 ಸಾವಿರ ಹಾಗೂ ಕುಶಲ ಕಾರ್ಮಿಕರಿಗೆ ₹32 ಸಾವಿರ ಕನಿಷ್ಠ ವೇತನ ನಿಗದಿಪಡಿಸಿದ್ದರೂ, ಕಾರ್ಖಾನೆ ಮಾಲೀಕರ ಒತ್ತಡದಿಂದ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಅಂಗನವಾಡಿ ಬಿಸಿಯೂಟ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಕ್ರಮಬದ್ಧಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರುಪಯೋಗದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅಧಿಕಾರಿಗಳ ವಿರುದ್ಧ ಅಪರಾಧಿಕ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಾಮಾಜಿಕ ಭದ್ರತಾ ಪಿಂಚಣಿ ಬಿಡುಗಡೆಗೆ ಆಗ್ರಹ
ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಅಂಗವಿಕಲರ ಪಿಂಚಣಿ ಸೇರಿದಂತೆ ಬಾಕಿ ಇರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಇದಲ್ಲದೆ, ಶಾಸಕರು ಮತ್ತು ಸಂಸದರ ವೇತನ ಹಾಗೂ ನಿವೃತ್ತಿ ವೇತನ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಪ್ರತಿಯೊಬ್ಬ ರೈತ ಮತ್ತು ಕಾರ್ಮಿಕರಿಗೆ ತಿಂಗಳಿಗೆ ₹10 ಸಾವಿರ ಗೌರವಧನ ನೀಡುವಂತೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮತದಾರರಿಗೆ ತಮ್ಮ ಪ್ರತಿನಿಧಿಗಳನ್ನು ಅವಧಿ ಪೂರ್ವವಾಗಿ ಹಿಂದಕ್ಕೆ ಕರೆಯುವ (Right to Recall) ಅಧಿಕಾರ ನೀಡುವಂತೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡರಾದ ಶಿವರಾಜ ಪಾಟೀಲ, ಕೋಂಡಿಬಾ ಪಾಂಡ್ರೆ, ಅರುಣ ಪಟೇಲ್, ಮಾರುತಿ ಬೌದ್ಧೆ, ಶಿವರಾಯ ಮುದಾಳೆ, ವೀರರೆಡ್ಡಿ ಪಾಟೀಲ್, ಮಲ್ಲಿಕಾರ್ಜುನ ಸ್ವಾಮಿ, ಜೈಶೀಲ ಕುಮಾರ, ಬಾಬುರಾವ ಹೊನ್ನಾ, ನಜೀರ ಅಹ್ಮದ್, ಎಂ.ಡಿ. ಖಮರ ಪಟೇಲ್, ವೀರಶೆಟ್ಟಿ ಒಟ್ಟಂಬೆ, ರಾಜಕುಮಾರ ಬಗದಲ್, ರಾಮಣ್ಣ ಅಲ್ಮಾಸಪೂರ, ಶೀಲಾ ಸಾಗರ, ಶಫಿಯೋದ್ದೀನ್ ಗೋಲ್ಡ್, ಶಫಾಯತ ಅಲಿ, ಪ್ರಭು ತಗಣಿಕರ್, ಚಂದ್ರಕಲಾ, ಸುಜಾತಾ, ಮಂಗಲಾ, ಕಲ್ಲಪ್ಪ ಸೈಬಣ್ಣ, ವೈಜಿನಾಥ ಹಣಮಂತಪ್ಪ, ರಾಚಮ್ಮ ಕಂಟೆಪ್ಪ, ಬಸವರಾಜ ಪಟೀಲ್, ಬಂಡೆಮ್ಮಾ, ಮೌಲಾನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to get the latest posts sent to your email.