1
1

ಬೀದರ: ಕುಟುಂಬದ ಹೆಸರಿನಲ್ಲಿ ಏಳು ಎಕರೆ ಜಮೀನು ಹಾಗೂ ಹೆಚ್ಚಿನ ಆದಾಯವಿದೆ ಎಂದು ತಪ್ಪು ಮಾಹಿತಿ ನಮೂದಿಸಿ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ ಎಂದು ಆರೋಪಿಸಿರುವ ಚಿಟಗುಪ್ಪಾ ತಾಲ್ಲೂಕಿನ ಮನ್ನಾಎಖೆಳ್ಳಿ ಗ್ರಾಮದ ವೀರಶೆಟ್ಟಿ ಕುಂಬಾರ ಅವರು, ಕೂಡಲೇ ತಮ್ಮ ಹಿಂದಿನ ಬಿಪಿಎಲ್ ಕಾರ್ಡ್ ಮರು ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ತಮ್ಮ ಕುಟುಂಬದ ಎಲ್ಲ ಸದಸ್ಯರು ಸೇರಿ ಕೇವಲ ಒಂದು ಎಕರೆ ಇನಾಮಿ ಜಮೀನು ಹೊಂದಿದ್ದು, ಏಳು ಎಕರೆ ಜಮೀನು ಇದೆ ಎಂದು ಯಾವ ಆಧಾರದ ಮೇಲೆ ದಾಖಲಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಬಿಪಿಎಲ್ ಕಾರ್ಡ್ ಸಂಖ್ಯೆ 560500188748 ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದ್ದು, ಇದರಿಂದ ಕಳೆದ ಒಂದು ವರ್ಷದಿಂದ ಬಡ ಕುಟುಂಬವು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಅವರು ದೂರಿದ್ದಾರೆ. ಅಧಿಕಾರಿಗಳ ದಾಖಲೆಯಲ್ಲಿ ತೋರಿಸಿರುವ ಏಳು ಎಕರೆ ಜಮೀನು ಯಾವ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ಸರ್ವೆ ನಂಬರಿನಲ್ಲಿದೆ ಎಂಬುದನ್ನು ತೋರಿಸಿದರೆ, ಅದನ್ನು ತಾವೇ ಕೃಷಿ ಮಾಡುವುದಾಗಿ ಅವರು ಸವಾಲು ಹಾಕಿದ್ದಾರೆ.
ಈ ಕುರಿತು 2025ರ ನವೆಂಬರ್ 12ರಂದು ಚಿಟಗುಪ್ಪಾ ತಹಸೀಲ್ದಾರ್ಗೆ ಅರ್ಜಿ ಸಲ್ಲಿಸಲಾಗಿತ್ತು. 2026ರ ಫೆಬ್ರವರಿ 22ರಂದು ಆಹಾರ ನಿರೀಕ್ಷಕರು ವರದಿ ನೀಡಿದ್ದು, ಏಪ್ರಿಲ್ 24ರಂದು ಬಿಪಿಎಲ್ಗೆ ಅರ್ಹರೆಂದು ಗುರುತಿಸಿ ತಹಸೀಲ್ದಾರ್ ವರದಿಯನ್ನು ಇಲಾಖೆಗೆ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಅರ್ಜಿ ಸಲ್ಲಿಸಿದ 25 ದಿನಗಳಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವಾರದೊಳಗೆ ಹಿಂದಿನ ಬಿಪಿಎಲ್ ಕಾರ್ಡ್ ಮರು ನೀಡದಿದ್ದರೆ ಬೀದರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ವೀರಶೆಟ್ಟಿ ಕುಂಬಾರ ಎಚ್ಚರಿಸಿದ್ದಾರೆ.
Subscribe to get the latest posts sent to your email.