1
1

ಕಲಬುರಗಿ,ಆ.10.(ಕರ್ನಾಟಕ ವಾರ್ತೆ)-ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನ ಹೆಸರು, ಉದ್ದು ಹಾಗೂ ಸೋಯಬೀನ್ ಬೆಳೆಗಳು ಬಿತ್ತನೆಯಾಗಿ 35 ರಿಂದ 55 ದಿನಗಳ (ಬೆಳವಣೆಗೆ ಹಾಗೂ ಹೂವು ಬಿಡುವ) ಹಂತ ತಲುಪಿವೆ. ಇತ್ತೀಚಿನ ಹವಾಮಾನ ವೈಪರೀತ್ಯ ಹಾಗೂ ಆಂಶಿಕ ಮಳೆಯ ವಾತಾವರಣದಿಂದಾಗಿ ರಸಹೀರುವ ಕೀಟಗಳು, ಎಲೆ/ ಕಾಂಡ ತಿನ್ನುವ ಹುಳುಗಳು ಮತ್ತು ಹಳದಿ ರೋಗದ ಲಕ್ಷಣಗಳು ಕಂಡುಬರುತ್ತಿವೆ.
ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ವಿಜ್ಞಾನಿಗಳು ಅನೇಕ ಗ್ರಾಮಗಳಿಗೆ ಭೇಟಿ ನೀಡಿದಾಗ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಲ್ಲಿ ಹಳದಿ ನಂಜುರೋಗದ ಬಾಧೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಳದಿ ನಂಜು ರೋಗ ಬಾಧೆಯ ಲಕ್ಷಣಗಳು: ಮೊದಲು ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು, ನಂತರ ಇವು ಹೆಚ್ಚಾಗಿ ಹಳದಿ ಹಸಿರು ಲಕ್ಷಣಗಳು ಕಂಡುಬರುತ್ತವೆ. ಕೊನೆಗೆ ಇಡೀ ಗಿಡದ ಎಲೆಗಳು ಮತ್ತು ಕಾಯಿಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆತಿರುಗಿ ಬಾಧೆ ಉಂಟು ಮಾಡುತ್ತದೆ. ಬಾಧೆ ತೀರ್ವವಾಗಿದ್ದಲ್ಲಿ ಇಡೀ ಹೊಲ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದಾಗಿ ಗಿಡದಲ್ಲಿ ಹೂ ಇರದೆ ಕಾಯಿಗಳು ಕಾಳು ಕಟ್ಟದೆ ಸಂಪೂರ್ಣವಾಗಿ ಹಳದಿಯಾಗುತ್ತದೆ. ಈ ಹಳದಿ ಮೊಸಾಯಿಕ್ ವೈರಸ್ ಸೋಯಾಬೀನ್, ಉದ್ದು ಮತ್ತು ಹೆಸರು ಕಾಳಿನ ಬೆಳೆಗಳಿಗೆ ಸೋಂಕು ತರುತ್ತದೆ.
ಹಳದಿ ನಂಜು ರೋಗ ನಿರ್ವಹಣಾ ಕ್ರಮಗಳು: ಹಳದಿ ನಂಜುರೋಗ ಬಾಧಿತ ಗಿಡಗಳನ್ನು ಹೊಲದಿಂದ ಕಿತ್ತು ಸುಟ್ಟು ನಾಶಪಡಿಸಿ ಹೊಲದಲ್ಲಿ ಪ್ರತಿ ಎಕರೆಗೆ 8 ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ ಒಂದು ಅಡಿ ಮೇಲೆ ಇರುವಂತೆ ಹಾಕಬೇಕು. ಸಿಂಪರಣೆಗಾಗಿ ಅಂರ್ತವ್ಯಾಪಿ ಕೀಟನಾಶಕ ಇಮಿಡಾಕ್ಲೋಪ್ರೀಡ್ ಅಥವಾ ಥಾಯೋಮೀಥ್ಯಾಕ್ಸಮ್ 0.3 ಗ್ರಾಂ ಅಥವಾ ಅಸಿಫೇಟ್ 1.0 ಗ್ರಾಂ + ಸ್ಟಿಕರ್ (ಅಂಟು) 1 ಮಿ. ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ, ಜೊತೆಗೆÉ 19:19:19 ಸಾ:ರಂ: ಪೊ ನೀರಿನಲ್ಲಿ ಕರಗುವ ರಸಗೊಬ್ಬರ (10ಗ್ರಾಂ/ಲೀಟರ್) ಸೇರಿಸಿ ಸಿಂಪರಣೆ ಮಾಡಬೇಕು. ಇದೇ ಸಿಂಪರಣೆ 15 ದಿವಸಗಳ ನಂತರ ಮತ್ತೊಮ್ಮೆ ಕೈಗೊಳ್ಳಬೇಕಾಗುತ್ತದೆ.
ಸೋಯಾಬೀನ್ ಬೆಳೆಯ ಕಾಯಿಕೊರಕ ಮತ್ತು ಕಾಂಡಕೊರಕ ಹುಳುಗಳ ನಿಯಂತ್ರಣಕ್ಕಾಗಿ ಥಯಾಮೆಥ್ಯಾಕ್ಸಮ್ ಶೇ.12.6+ಲ್ಯಾಂಬ್ಡಾ ಸೈಹ್ಯಾಲೋಥ್ರೀನ್ ಶೇ.9.5 ಎಸ್.ಸಿ ಕೀಟನಾಶಕವನ್ನು 15 ರಿಂದ 20 ಮಿ.ಲೀ ನಷ್ಟು ಪ್ರಮಾಣದಲ್ಲಿ 16 ಲೀಟರ್ ಸಾಮಥ್ರ್ಯದ ಪಂಪ್ ಟ್ಯಾಂಕಿಗೆ ಬೆರೆಸಿ ಸಿಂಪಡಿಸಬೇಕು ಹಾಗೂ ಇತರೆ ರಸಹೀರುವ ಕೀಟಗಳ ನಿವಾರಣೆಗೆÀ ಎಸಿಟಾಮಿಪ್ರಿಡ್ ಶೇ.20 ಎಸ್.ಪಿ (2.0ಗ್ರಾಂ/ಲೀಟರ್) ಜೊತೆಗೆ 19:19:19 ಸಾ:ರಂ: ಪೊ ನೀರಿನಲ್ಲಿ ಕರಗುವ ರಸಗೊಬ್ಬರವನ್ನು (10 ಗ್ರಾಂ/ಲೀಟರ್) ಬೆರೆಸಿ ಸಿಂಪಡಿಸಬೇಕು ಎಂದು ಎ.ಇ.ಇ.ಸಿ ಮುಂದಾಳು ಡಾ|| ಆರ್. ಎಲ್. ಜಾಧವ ತಿಳಿಸಿದ್ದಾರೆ.
Subscribe to get the latest posts sent to your email.