Popular Posts

ಬೀದರ್‌ನಲ್ಲಿ ESI ಆಸ್ಪತ್ರೆ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಮನವಿ

ಬೀದರ್/ನವದೆಹಲಿ: ಬೀದರ್ ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಹಾಗೂ ನೌಕರರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಕಾರ್ಮಿಕರು ಮತ್ತು ಅವರ ಕುಟುಂಬಗಳ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಸ್ವತಂತ್ರ ಹಾಗೂ ಸುಸಜ್ಜಿತ ESI ಆಸ್ಪತ್ರೆ ಸ್ಥಾಪಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರಿಗೆ ಬೀದರ್ ಬಿಜೆಪಿ ನಿಯೋಗ ಮನವಿ ಸಲ್ಲಿಸಿತು.
ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗವು, ಬೀದರ್ ಜಿಲ್ಲೆಯಲ್ಲಿ ಕೈಗಾರಿಕಾ, ವಾಣಿಜ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಮತ್ತು ನೌಕರರ ಸಂಖ್ಯೆ ಗಣನೀಯವಾಗಿದ್ದು, ಅವರ ಆರೋಗ್ಯ ಸೇವೆಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸಚಿವರ ಗಮನಕ್ಕೆ ತಂದಿತು.
ಪ್ರಸ್ತುತ ಜಿಲ್ಲೆಯಲ್ಲಿ ESI ವ್ಯಾಪ್ತಿಗೆ ಒಳಪಡುವ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರು ಹೆಚ್ಚಿನ ಚಿಕಿತ್ಸೆ, ತುರ್ತು ಚಿಕಿತ್ಸಾ ಸೇವೆ ಹಾಗೂ ವಿಶೇಷ ವೈದ್ಯಕೀಯ ಸೌಲಭ್ಯಗಳಿಗಾಗಿ ಕಲಬುರಗಿ, ಹೈದರಾಬಾದ್ ಸೇರಿದಂತೆ ದೂರದ ನಗರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಮಯ ಹಾಗೂ ಆರ್ಥಿಕ ವೆಚ್ಚ ಹೆಚ್ಚಾಗುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ ಅವರ ಕುಟುಂಬಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿಯೋಗ ವಿವರಿಸಿತು.
ಬೀದರ್‌ನಲ್ಲಿಯೇ ಸುಸಜ್ಜಿತ ESI ಆಸ್ಪತ್ರೆ ಸ್ಥಾಪನೆಯಾದರೆ ಜಿಲ್ಲೆಯ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸ್ಥಳೀಯವಾಗಿಯೇ ದೊರೆಯಲಿದೆ. ತಜ್ಞ ವೈದ್ಯರು, ಅಗತ್ಯ ವೈದ್ಯಕೀಯ ಉಪಕರಣಗಳು, ತುರ್ತು ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದು ನಿಯೋಗ ತಿಳಿಸಿತು.
ಕಾರ್ಮಿಕರು ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದ್ದು, ಅವರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಗೆ ESI ಆಸ್ಪತ್ರೆ ಮಂಜೂರು ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಯಿತು.
ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ನಗದುರಹಿತ ಚಿಕಿತ್ಸೆ ಸೇರಿದಂತೆ ESI ಯೋಜನೆಯಡಿ ಲಭ್ಯವಾಗುವ ವಿವಿಧ ವೈದ್ಯಕೀಯ ಸೌಲಭ್ಯಗಳು ಬೀದರ್‌ನಲ್ಲಿಯೇ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆ ಸ್ಥಾಪನೆಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಸಚಿವರ ಬಳಿ ಒತ್ತಾಯಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಸಚಿವರು, ಬೀದರ್ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳು ಹಾಗೂ ESI ಆಸ್ಪತ್ರೆಯ ಅಗತ್ಯತೆಯ ಕುರಿತು ನಿಯೋಗದೊಂದಿಗೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಕಾರ್ಮಿಕರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳು, ಆರೋಗ್ಯ ಸೇವೆ ಹಾಗೂ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಬೀದರ್ ಜಿಲ್ಲೆಯಲ್ಲಿ ESI ಆಸ್ಪತ್ರೆ ಸ್ಥಾಪನೆಯಾದಲ್ಲಿ ಜಿಲ್ಲೆಯ ಸಾವಿರಾರು ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾಗಲಿದ್ದು, ತುರ್ತು ಸಂದರ್ಭದಲ್ಲಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ. ಇದರಿಂದ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಮತ್ತಷ್ಟು ಬಲ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್,  ಬಿಜೆಪಿ ರಾಜ್ಯ ಕಾರ್ಯದರ್ಶಿಗಳು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಔರಾದ ಶಾಸಕರಾದ ಪ್ರಭು ಬಿ. ಚವ್ಹಾಣ್, ಬಸವಕಲ್ಯಾಣ ಶಾಸಕರಾದ ಶರಣು ಸಲಗರ, ಹುಮನಾಬಾದ ಶಾಸಕರಾದ ಸಿದ್ದು ಪಾಟೀಲ್, ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬೀದರ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಯರನಳ್ಳಿ, ಕಿರಣ್ ಪಾಟೀಲ್ ಹಾಗೂ ಪಕ್ಷದ ಮುಖಂಡರಾದ   ಬಾಬು ವಾಲಿ   ಬಸವರಾಜ ಆರ್ಯ, ಬಾಬುರಾವ ಕಾರಬಾರಿ, ಈಶ್ವರ್ ಸಿಂಗ್ ಠಾಕೂರ್,  ಉಪಸ್ಥಿತರಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading