1
1

ಬೀದರ: ಆಣದೂರಿನ ಸೆಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ದೇವರ ಕೃಪೆ ಹಾಗೂ ಆಶೀರ್ವಾದದೊಂದಿಗೆ ವಿಶೇಷ ಅಭಿನಂದನಾ ಸಮಾರಂಭ ನಡೆಯಿತು. ಸಾಮಾಜಿಕ ಪರಿಶೋಧನಾ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟ, ಬೆಂಗಳೂರು ಇದರ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದೇವದಾಸ ಯಾಕೋಬ ಮುಸ್ಕೆ ಅವರನ್ನು ಚರ್ಚ್ ಆಡಳಿತ ಮಂಡಳಿ, ಗ್ರಾಮಸ್ಥರು ಹಾಗೂ ಕ್ರೈಸ್ತ ವಿಶ್ವಾಸಿಗಳು ಆತ್ಮೀಯವಾಗಿ ಅಭಿನಂದಿಸಿದರು.
ಜುಲೈ 25ರಂದು ಹಾಸನದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ದೇವದಾಸ ಯಾಕೋಬ ಮುಸ್ಕೆ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಆಣದೂರು ಚರ್ಚ್ ಹಾಗೂ ಸ್ಥಳೀಯ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಣದೂರು ಸೆಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ನ ರೆವರೆಂಡ್ ಸುರೇಶ ಪಾಸ್ಟರ್ ಕೆಳಕೇರಿ, ದೇವದಾಸ ಯಾಕೋಬ ಮುಸ್ಕೆ ಅವರಿಗೆ ದೇವರು ಜ್ಞಾನ, ಶಕ್ತಿ ಹಾಗೂ ಆಶೀರ್ವಾದ ನೀಡಲಿ ಎಂದು ಹಾರೈಸಿದರು. ಗ್ರಾಮ, ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಬಡವರು ಹಾಗೂ ಅಗತ್ಯವಿರುವವರ ಸೇವೆಗೆ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಿಸಲಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೇವದಾಸ ಯಾಕೋಬ ಮುಸ್ಕೆ, ರಾಜ್ಯಾಧ್ಯಕ್ಷ ಸ್ಥಾನವನ್ನು ದೇವರು ನೀಡಿರುವ ಮಹತ್ವದ ಜವಾಬ್ದಾರಿ ಎಂದು ಭಾವಿಸುವುದಾಗಿ ತಿಳಿಸಿದರು. ತಮ್ಮ ಆಯ್ಕೆಗೆ ಸಹಕರಿಸಿದ ಸಮಾಜಕ ಪರಿಶೋಧನೆ ನಿರ್ದೇಶನಾಲಯದ ಸಿಬ್ಬಂದಿಗಳಿಗೂ ಹಾಗೂ ಚರ್ಚ್ ಆಡಳಿತ ಮಂಡಳಿ, ಗ್ರಾಮಸ್ಥರು ಹಾಗೂ ಕ್ರೈಸ್ತ ವಿಶ್ವಾಸಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಪ್ರತಿಯೊಂದು ಗ್ರಾಮಕ್ಕೂ ತೆರಳಿ ಬಡವರ ಮಧ್ಯೆ ಇದ್ದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ VBG-RAMG ಯೋಜನೆಯಡಿ 125 ದಿನಗಳ ಕೂಲಿ ಕೆಲಸ ದೊರಕುವಂತೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಬಡವರ ಬದುಕಿನಲ್ಲಿ ಆಶಾಕಿರಣ ಮೂಡಿಸುವುದೇ ನಿಜವಾದ ಸೇವೆಯಾಗಿದ್ದು, ದೇವರ ಪ್ರೀತಿ, ಕರುಣೆ ಹಾಗೂ ಸಹೋದರತ್ವದ ಸಂದೇಶವನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಸಮಾಜದ ಒಳಿತಿಗಾಗಿ ಸೇವಾ ಕಾರ್ಯಗಳನ್ನು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ Rev. ಸುರೇಶ್ ಕೆಳಕೇರಿ ಆಣದೂರ, ಸುನೀಲ್ ಬಾಬಾಪ್ಪ, ಪಂಡಿತ್ ಬಾಬಣ್ಣ, ಸುಜ್ಞಾನಿ ಲಾಲಪ್ಪ, ಜಾನ್ ಕೆನೋಡಿ, ಕಿರಣ್ ಕುಮಾರ್, ರಾಜಕುಮಾರ್ ಜೋಸೆಫ್ ಹಾಗೂ ಮೋಹನ್ ವಗ್ಗಿ ಸೇರಿದಂತೆ ಸಭಾ ಪಾಲನಾ ಸಮಿತಿ, ಚರ್ಚ್ ಸದಸ್ಯರು, ಆಡಳಿತ ಮಂಡಳಿ, ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to get the latest posts sent to your email.