Popular Posts

ಹೂಗಾರ ಮಹಾಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ

ಬೀದರ್: ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಬೀದರ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗುರುವಾರ ನಗರದ ಚಿದ್ರಿ ಬಳಿಯ ಶ್ರೀ ಬುತ್ತಿ ಬಸವಣ್ಣ ದೇವಸ್ಥಾನದ ಸಭಾಂಗಣದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆಯಾಯಿತು.
ಸಮಾರಂಭದಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಬೀದರ್ ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಪೀಲ್ ಹೂಗಾರ ಗಾದಗಿ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಸಿದ್ದು ಫುಲಾರಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ, ಹೂಗಾರ ಸಮುದಾಯದ ಬಹುದಿನಗಳ ಹೋರಾಟದ ಫಲವಾಗಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೂಗಾರ ನಿಗಮ ಮಂಡಳಿ ಸ್ಥಾಪಿಸಿತ್ತು. ನಿಗಮ ಸ್ಥಾಪನೆಯಾಗಿ ಹಲವು ವರ್ಷಗಳು ಕಳೆದರೂ ಇದುವರೆಗೆ ಅಗತ್ಯ ಅನುದಾನ ನೀಡಿಲ್ಲ ಹಾಗೂ ಅಧ್ಯಕ್ಷರ ನೇಮಕವೂ ಆಗಿಲ್ಲ. ಇದರಿಂದ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೂಗಾರ ಸಮುದಾಯವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳ ಅಗತ್ಯವಿದೆ. ವಿದ್ಯಾರ್ಥಿಗಳ ಶಿಕ್ಷಣ, ವೃತ್ತಿಪರ ತರಬೇತಿ, ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ, ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಗಮದ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.


ಹೀಗಾಗಿ ಹೂಗಾರ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಹೂಗಾರ ನಿಗಮಕ್ಕೆ ₹1,000 ಕೋಟಿ ಅನುದಾನ ಒದಗಿಸಬೇಕು. ಜೊತೆಗೆ ನಿಗಮಕ್ಕೆ ತಕ್ಷಣವೇ ಅಧ್ಯಕ್ಷರನ್ನು ನೇಮಕ ಮಾಡಿ, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಮತ್ತು ಅನುದಾನ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಿಗಮಕ್ಕೆ ಅನುದಾನ ನೀಡುವುದು ಹಾಗೂ ಅಧ್ಯಕ್ಷರನ್ನು ನೇಮಕ ಮಾಡುವಂತೆ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಸರ್ಕಾರವು ಹೂಗಾರ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮುದಾಯದ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ರಾಜ್ಯದ ವಿವಿಧ ಜಿಲ್ಲೆಗಳ ಹೂಗಾರ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಘಟಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಬಸವರಾಜ ಹೂಗಾರ ಎಚ್ಚರಿಕೆ ನೀಡಿದರು.
ನೂತನ ಪದಾಧಿಕಾರಿಗಳು ಕೇವಲ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಷ್ಟೇ ಅಲ್ಲದೆ, ಜಿಲ್ಲೆಯಾದ್ಯಂತ ಹೂಗಾರ ಸಮುದಾಯದ ಜನರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ, ಮಹಿಳೆಯರಿಗೆ ಸ್ವಾವಲಂಬನೆ, ಬಡ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಮುಖಂಡರು ಕರೆ ನೀಡಿದರು.

ಬೀದರ್ ಜಿಲ್ಲಾ ಘಟಕವು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಘಟನೆಯನ್ನು ವಿಸ್ತರಿಸಿ, ಸಮುದಾಯದ ಪ್ರತಿಯೊಬ್ಬರನ್ನು ಸಂಘಟನೆಯೊAದಿಗೆ ಬೆಸೆಯುವ ಮೂಲಕ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಲಾಯಿತು.
ಸಮಾರಂಭದಲ್ಲಿ ಸಮಾಜದ ಮುಖಂಡರಾದ ಚಂದ್ರಕಾAತ ಹೂಗಾರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಬುಯ್ಯಾರ, ಕಲಬುರಗಿ ಜಿಲ್ಲಾಧ್ಯಕ್ಷ ಪ್ರಕಾಶ ಫುಲಾರಿ, ಯಾದಗಿರಿ ಜಿಲ್ಲಾಧ್ಯಕ್ಷ ಭೀಮಣ್ಣಾ ಹೂಗಾರ, ಗದಗ ಜಿಲ್ಲಾಧ್ಯಕ್ಷ ಮಾಂತೇಶ್ ಹಾಗಾಗಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶೋಭಾವತಿ ಫುಲಾರಿ, ಶಕುಂತಲಾ ಬೇಲ್ದಾಳೆ, ಸೋಮಶೇಖರ್ ಪಾಟೀಲ್ ಗಾದಗಿ, ಜಿಲ್ಲೆಯ ಉದ್ಯಮಿಗಳಾದ ದೀಪಕ್ ವಾಲಿ, ರವಿ ಬೆಳಕೆರೆ, ಮಾರುತೆಪ್ಪ ಹೂಗಾರ, ಸತೀಶ ಹೂಗಾರ, ಶ್ರೀನಿವಾಸ, ಹಣಮಂತಪ್ಪ ಹೂಗಾರ, ಮಾದಪ್ಪ ಹೂಗಾರ, ಬಸವರಾಜ ಹೂಗಾರ, ರಾಜಕುಮಾರ ಹೂಗಾರ ಭಾಲ್ಕಿ, ಘಳೆಪ್ಪ, ಮಾರುತಿ ಹೂಗಾರ ಹಾಗೂ ಉಮೇಶ್ ಹೂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು ಮಾತನಾಡಿ, ಜಿಲ್ಲೆಯ ಹೂಗಾರ ಸಮುದಾಯದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಪ್ರಗತಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಸಮುದಾಯದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಘಟಕದೊಂದಿಗೆ ಕೈಜೋಡಿಸಿ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading