1
1

ಬೀದರ್:ಬೀದರ್ನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನದ ಸಿದ್ಧತೆಗಳು ಇದೀಗ ಅಂತಿಮ ಹಂತಕ್ಕೆ ತಲುಪಿವೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏಪ್ರಿಲ್ 11 ಮತ್ತು 12 ರಂದು (ಶನಿವಾರ ಹಾಗೂ ಭಾನುವಾರ) ಬೀದರ್ನಲ್ಲಿ ನಡೆಯಲಿರುವ ಈ ಮಹತ್ವದ ಸಮ್ಮೇಳನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಗೊಂಡ ಸುಮಾರು 60ಕ್ಕೂ ಹೆಚ್ಚು ಅತ್ಯುತ್ತಮ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.
ಇಂದು ಬೀದರ್ ನಗರದ ಝೆರಾ ಕನ್ವೆನ್ಷನ್ ಸೆಂಟರ್ ಆವರಣದಲ್ಲಿ ಛಾಯಾಚಿತ್ರ ಪ್ರದರ್ಶನದ ಸ್ಟಾಲ್ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯಗಳು ಪೂರ್ಣಗೊಂಡಿದ್ದು, ಪ್ರದರ್ಶನಕ್ಕೆ ಅಂತಿಮ ಸ್ಪರ್ಶ ನೀಡಲಾಗಿದೆ. ಛಾಯಾಚಿತ್ರಗಳ ಅಳವಡಿಕೆಯನ್ನು ಸುಂದರವಾಗಿ ಹಾಗೂ ಆಕರ್ಷಕವಾಗಿ ರೂಪಿಸುವ ಮೂಲಕ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ವಿಶೇಷ ಅನುಭವ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನದ ಸಂದರ್ಭದಲ್ಲಿ ಈ ಛಾಯಾಚಿತ್ರ ಪ್ರದರ್ಶನವನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.
ಈ ಸಿದ್ಧತಾ ಕಾರ್ಯಗಳ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ, ಮಾಜಿ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಛಾಯಾಚಿತ್ರ ಪ್ರದರ್ಶನ ಸಮಿತಿಯ ಪ್ರಧಾನ ಸಂಚಾಲಕರಾದ ಗೋಪಿಚಂದ ತಾಂದಳೆ, ಪದಾಧಿಕಾರಿಗಳಾದ ಶ್ರವಣಕುಮಾರ, ಲೋಕೆಶ ಬಿರಾದಾರ, ನರೇಂದ್ರ ಪಾಟೀಲ್ ಹಾಗೂ ಕಲಬುರಗಿಯ ಖ್ಯಾತ ಛಾಯಾಚಿತ್ರಗಾರ ನಾರಾಯಣ ಜೋಶಿ ಸೇರಿದಂತೆ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದು, ಸಿದ್ಧತಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು.
ಒಟ್ಟಾರೆ, 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ನಡೆಯಲಿರುವ ಈ ಛಾಯಾಚಿತ್ರ ಪ್ರದರ್ಶನವು ಪತ್ರಿಕೋದ್ಯಮದ ವಿವಿಧ ಮುಖಗಳನ್ನು, ಸಾಮಾಜಿಕ ಘಟನೆಗಳನ್ನು ಹಾಗೂ ಸೃಜನಾತ್ಮಕ ಛಾಯಾಗ್ರಹಣವನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ ಅವರು ತಿಳಿಸಿದ್ದಾರೆ.