1
1

ಬೀದರ್: ಬೀದಿ ವ್ಯಾಪಾರಿಗಳಿಂದ ನಗರ ಪಾಲಿಕೆ ವಸೂಲಿ ಮಾಡುತ್ತಿರುವ ಶುಲ್ಕವನ್ನು ರೂ.20ರಿಂದ 60ಕ್ಕೆ ಏರಿಸಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ಬೀದರ ನಗರ ಘಟಕ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಗಣೇಶ್ ಮೈದಾನದಿಂದ ನಗರ ಪಾಲಿಕೆ ಕಚೇರಿವರೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಡ ಬೀದಿ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಶುಲ್ಕದ ಹೊರೆ ಹಾಕಬಾರದು. ಈಗಾಗಲೇ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಸಣ್ಣ ವ್ಯಾಪಾರಿಗಳಿಂದ ದಿನಕ್ಕೆ ರೂ.60 ಶುಲ್ಕ ವಸೂಲಿ ಮಾಡುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, “ಬೀದಿ ವ್ಯಾಪಾರಿಗಳ ಶುಲ್ಕವನ್ನು ರೂ.20ರಿಂದ ರೂ.60ಕ್ಕೆ ಏರಿಸಿರುವುದು ಬಡ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ. ಶುಲ್ಕ ವಸೂಲಿ ಮಾಡುವ ಅಧಿಕಾರ ಯಾರಿಗೆ ನೀಡಲಾಗಿದೆ, ಟೆಂಡರ್ ಪ್ರಕ್ರಿಯೆ ಹೇಗೆ ನಡೆದಿದೆ, ಎಷ್ಟು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ ಹಾಗೂ ವ್ಯಾಪಾರಿಗಳಿಂದ ಎಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬುದನ್ನು ನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು,” ಎಂದು ಆಗ್ರಹಿಸಿದರು.
“ಕೇವಲ ಸಚಿವರೊಬ್ಬರನ್ನೇ ಈ ವಿಚಾರದಲ್ಲಿ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಗರ ಪಾಲಿಕೆ ಅಧಿಕಾರಿಗಳಿಗೂ ಸಮಾನ ಜವಾಬ್ದಾರಿ ಇದೆ. ಶುಲ್ಕ ವಸೂಲಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು. ಡುಪ್ಲಿಕೇಟ್ ರಸೀದಿ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವಾಗ ಅಧಿಕೃತ ರಸೀದಿ ನೀಡಬೇಕು. ಸಾಧ್ಯವಾದರೆ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು,” ಎಂದು ಅವರು ಹೇಳಿದರು.
ನಗರದ ವಾಕಿಂಗ್ ಸ್ಟ್ರೀಟ್ ಸೇರಿದಂತೆ ವಿವಿಧ ವ್ಯಾಪಾರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ವಾಹನ ಸಂಚಾರ ಹಾಗೂ ವ್ಯಾಪಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯಂತ್ರಿಸಿ, ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆಯಾಗದAತೆ ನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿತು.
ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ ಅವರು ಮಾತನಾಡಿ ನಗರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಶಾಸಕ ರಹೀಂ ಖಾನ್ ವಿರುದ್ಧ ಆರೋಪಿಸಿದರು.
ಬಾಬು ವಾಲಿ ಅವರು ನಗರ ಪಾಲಿಕೆಯ ಕಾಮಗಾರಿಗಳ ಕಡತಗಳು ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಪರಿಶೀಲಿಸಿದರೆ, ಕೆಲವು ಗುತ್ತಿಗೆಗಳು ನಿರ್ದಿಷ್ಟ ವ್ಯಕ್ತಿಗಳು ಹಾಗೂ ಶಾಸಕರ ಸಂಬAಧಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಅವರು ಹೇಳಿದರು.
ಸ್ಟ್ರೀಟ್ಲೈಟ್, ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳ ಟೆಂಡರ್ ಯಾರಿಗೆ ನೀಡಲಾಗಿದೆ ಎಂಬುದನ್ನು ನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಎಲ್ಲ ಗುತ್ತಿಗೆದಾರರಿಗೆ ಸಮಾನ ಅವಕಾಶ ನೀಡಬೇಕು ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಾವಿರಾರು ಮನೆಗಳು ಮಂಜೂರಾಗಿದ್ದು, ವಿವಿಧ ತಾಲೂಕುಗಳಲ್ಲಿ ಬಡವರಿಗೆ ಮನೆಗಳ ಹಂಚಿಕೆ ನಡೆದಿದೆ. ಆದರೆ ಬೀದರ್ ನಗರದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಬಡವರಿಗೆ ಒಂದೇ ಒಂದು ಮನೆ ಕೂಡ ನೀಡಲಾಗಿಲ್ಲ ಎಂದು ಅವರು ಆರೋಪಿಸಿದರು.
ಆಶ್ರಯ ಯೋಜನೆಗೆ ಸಂಬAಧಿಸಿದ ಸಭೆಗಳನ್ನು ಸಮರ್ಪಕವಾಗಿ ನಡೆಸದಿರುವುದರಿಂದ ಬಡವರಿಗೆ ಮನೆ ಕಲ್ಪಿಸುವ ಯೋಜನೆಗಳು ವಿಳಂಬವಾಗುತ್ತಿವೆ. ಮಂಜೂರಾದ ಅನುದಾನ ಬಳಕೆಯಾಗದೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಅದಕ್ಕೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಬೀದರ್ ನಗರದಲ್ಲಿ ಕೂಡಲೇ ಆಶ್ರಯ ಯೋಜನೆಯ ಸಭೆ ನಡೆಸಿ, ಜಿ+4 ಮಾದರಿಯ ಮನೆಗಳನ್ನು ನಿರ್ಮಿಸಿ ಅರ್ಹ ಬಡ ಕುಟುಂಬಗಳು ಹಾಗೂ ಬೀದಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿತು.
ಬೀದಿ ವ್ಯಾಪಾರಿಗಳ ಮೇಲಿನ ಹೆಚ್ಚುವರಿ ಶುಲ್ಕ ಹಿಂಪಡೆಯುವುದು, ಅಭಿವೃದ್ಧಿ ಕಾಮಗಾರಿಗಳ ಟೆಂಡರ್ಗಳಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಬಡವರಿಗೆ ವಸತಿ ಒದಗಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಈಶ್ವರ್ಸಿಂಗ ಠಾಕೂರ, ಸುಭಾಷ್ ಮಡಿವಾಳ, ಗಣೇಶ್ ಭೋಸಲೇ, ಬಾಬು ಮಲ್ಕಾಪೂರೆ, ರೋಷನ್ ವರ್ಮಾ, ಪೀರಪ್ಪ ಔರಾದೆ, ಶ್ರೀನಿವಾಸ್ ಚೌದ್ರಿ, ರಾಜಶೇಖರ್ ನಾಗಮೂರ್ತಿ, ಹನಮಂತ್ ಬುಳ್ಳಾ, ದೀಪಕ ಗಾದಗೆ, ನರೇಶ್ ಗೌಳಿ, ಅಶೋಕ್ ಕಾರಂಜಿ, ನವೀನ್ ಚಿಟ್ಟಾ, ಗೊರಖನಾಥ್ ಗೌಳಿ, ನಿಲೇಶ್ ರಕ್ಷಾಳ್, ಮಲ್ಲಿಕಾರ್ಜುನ್ ನಂದಗಾAವಕರ್, ಸಂಗಮೇಶ, ಅಂಬರೀಷ್ ಕಾಮಠಾಣೆ, ಆತ್ಮರಾಮ್, ಬಸವ ಮುಲಗೆ ನೂಬಾದ, ವಿರೇಶ ಸ್ವಾಮಿ, ನಿರಂಜನ್, ಶಶಿಕಾಂತ್, ಜಗದೀಶ್ ಹಾಗೂ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಬೀದಿ ಬದಿ ವ್ಯಾಪಾರಿಗಳು, ಉಪಸ್ಥಿತರಿದ್ದರು.
Subscribe to get the latest posts sent to your email.