ಬೀದರ್: ಕ್ಯಾನ್ಸರ್ನಲ್ಲಿ ಹಲವಾರು ವಿಧಗಳಿದ್ದು, ರೋಗದ ಸ್ವರೂಪ ಹಾಗೂ ಟ್ಯೂಮರ್ನ ಬಯಾಲಜಿಯನ್ನು ಆಧರಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿದೆ ಎಂದು ಸಿಕಂದರಾಬಾದ್ನ ಯಶೋಧಾ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಶಿವಪ್ರಸಾದ್ ದೇಶಮುಖ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10ರಿಂದ 20 ವರ್ಷಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಮುಖ್ಯವಾಗಿ ಶಸ್ತ್ರಚಿಕಿತ್ಸೆ ಅಥವಾ ಕಿಮೊಥೆರಪಿಯನ್ನೇ ಅವಲಂಬಿಸಲಾಗುತ್ತಿತ್ತು. ಆದರೆ, ಇದೀಗ ಪ್ರತಿಯೊಬ್ಬ ರೋಗಿಯ ಸ್ಥಿತಿ ಹಾಗೂ ಕ್ಯಾನ್ಸರ್ನ ವಿಧಕ್ಕೆ ಅನುಗುಣವಾಗಿ ವಿವಿಧ ಚಿಕಿತ್ಸಾ ವಿಧಾನಗಳು ಲಭ್ಯವಿವೆ ಎಂದರು.
ಟ್ಯೂಮರ್ನ ಬಯಾಲಜಿಯನ್ನು ತಿಳಿದುಕೊಂಡು ರೋಗಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಆಯ್ಕೆ ಮಾಡಲಾಗುತ್ತಿದೆ. ಹೊಸ ಚಿಕಿತ್ಸಾ ವಿಧಾನಗಳ ಮೂಲಕ ಕ್ಯಾನ್ಸರ್ ಇರುವ ನಿರ್ದಿಷ್ಟ ಭಾಗವನ್ನೇ ಗುರಿಯಾಗಿಸಿಕೊಂಡು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಇದರಿಂದ ಚಿಕಿತ್ಸೆಯ ಫಲಿತಾಂಶ ಉತ್ತಮವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.
ಹೊಸ ತಂತ್ರಜ್ಞಾನದ ರೇಡಿಯೇಷನ್ ಯಂತ್ರಗಳ ನೆರವಿನಿಂದ ಕೆಲವು ಸಂದರ್ಭಗಳಲ್ಲಿ ಅನಸ್ತೇಶಿಯಾ ನೀಡದೆ ಹಾಗೂ ಶಸ್ತ್ರಚಿಕಿತ್ಸೆ ಮಾಡದೆ ಚಿಕಿತ್ಸೆ ನೀಡಬಹುದಾಗಿದೆ. ಇಂತಹ ಅತ್ಯಾಧುನಿಕ ಯಂತ್ರಗಳು ಆಸ್ಪತ್ರೆಗಳಲ್ಲಿ ಲಭ್ಯವಿವೆ ಎಂದು ಹೇಳಿದರು.
ತಾವು ಕಳೆದ 13 ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಶ್ವಾಸಕೋಶ, ಜಠರ-ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದೇನೆ. ಬೀದರ್ನ ವಾಸು ಮತ್ತು ತಳವಾಡೆ ಆಸ್ಪತ್ರೆಗೆ ಪ್ರತಿ ಶನಿವಾರ ಭೇಟಿ ನೀಡಿ ರೋಗಿಗಳಿಗೆ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿದ್ದೇನೆ. ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಿಕಂದರಾಬಾದ್ನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಚಿಲಕರವಾರ ಸತೀಶ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.