Popular Posts

ಬಸಂತಪೂರದಲ್ಲಿ ಮೆಣಸಿನ ಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ

ಬೀದರ, ಫೆಬ್ರವರಿ.17 :- ಮೆಣಸಿನ ಕಾಯಿ ಬೆಳೆಯ ತಳಿಯನ್ನು ಕ್ಷೇತ್ರಕ್ಕೆ ಹೊಸದಾಗಿ ಪರಿಚಯಿಸುವ ಮುಖಾಂತರ ಹೆಚ್ಚಿನ ಲಾಭ ಪಡೆಯಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ ನೀಡಿದರು.
ಅವರು ಸೋಮವಾರ ಬೀದರ ಜಿಲ್ಲೆಯ ಬಸಂತಪೂರ ಗ್ರಾಮದ ರೈತರಾದ ಈರಪ್ಪ ಕಾಳೆ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಮೆಣಸಿನ ಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೆಣಸಿನ ಕಾಯಿಯು ಒಂದು ತೋಟಗಾರಿಕಾ ಹಾಗೂ ವಾಣಿಜ್ಯ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಸಿ ಹಾಗೂ ಒಣ ಮೆಣಸಿನ ಕಾಯಿ ಬೇಸಾಯ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ರೈತರು ಮೆಣಸಿನ ಕಾಯಿಯನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಅಧಿಕ ಲಾಭವನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ರೈತರು ಹವಾಮಾನ ಅನುಗುಣವಾಗಿ ಶಿಫಾರಿತ ತಳಿಗಳನ್ನು ಬೆಳೆಸಲು ಕ್ರಮವಹಿಸುವಂತೆ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ ನೀಡಿದರು.
ಭಾಲ್ಕಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಅವರು ಮಾತನಾಡಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ರೈತರು ತಪ್ಪದೇ ತಮ್ಮ ತಾಕುಗಳ ಮಣ್ಣು ಪರೀಕ್ಷೆ ಮಾಡಿಸಿ, ಅದಕ್ಕೆ ಅನುಗುಣವಾಗಿ ಬೆಳೆಗಳ ಸಊಕ್ತ ತಳಿಗಳನ್ನು ಬೆಳೆಯುವುದರಿಂದ ಅಧಿಕ ಇಳುವರಿ ಪಡೆಯಬಹುದೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅರವಿಂದಕುಮಾರ ರಾಠೋಡ ಅವರು ಮಾತನಾಡಿ, ಮೆಣಸಿನಕಾಯಿ ಬೆಳೆಯ ಬೀಜೋತ್ಪಾದನೆ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ವತಿಯಿಂದ ಅಭಿವೃದ್ಧಿಪಡಿಸಲಾದ ಕೃಷ್ಣ ಪ್ರಭಾ ರುದ್ರ ತಳಿಯ ಪ್ರಾತ್ಯಕ್ಷಿಕೆ ಹಾಗೂ ಹೊಸ ತಳಿಗಳ ಪರಿಚಯ ಅಡಿಯಲ್ಲಿ ಆಸಕ್ತ ರೈತರಿಗೆ ಬೀಜ ಹಾಗೂ ಸಸಿಗಳನ್ನು ವಿತರಿಸಲಾಯಿತು.
ಬಸಂತಪೂರ ಗ್ರಾಮದ ಪ್ರಗತಿಪರಿ ರೈರಾದ ಬಸವರಾಜ ಕಾಳೆ, ಗುರುಲಿಗಪ್ಪಾ ಪಾಟೀಲ್, ವೆಂಕಟರಾವ ಬಿರಾದಾರ, ನರಸಾ ರೆಡ್ಡಿ, ಸುಭಾಸ ಪಾಟೀಲ್ ಅವರು ಮುಂಬರುವ ದಿನಗಳಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ ಬೀದರ ವತಿಯಿಂದ ಇತರೆ ತೋಟಗಾರಿಕೆ ಬೆಳೆಗಳ ಕ್ಷೇತ್ರೋತ್ಸವ ಆಯೋಜಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಅಧಿಕಾರಿ ಮಹೆಬೂಬ, ಡಾ.ರಾಜಕುಮಾರ ಎಮ್., ಬಸಂತಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಬೀದರನ ವಿಸ್ತರಣಾ ಘಟಕದ ಅಧಿಕಾರಿ ಜಾನವಿ ಡಿ.ಆರ್. ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!