1
1

ಬೀದರ್:-ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬೀದರ್ ಜಿಲ್ಲೆಯ ಬಸ್ಸುಗಳ ಮೇಲೆ ಗುಟಕಾ, ತಂಬಾಕು ಹಾಗೂ ಸಿಗರೇಟ್ ಉತ್ಪನ್ನಗಳ ಜಾಹೀರಾತು ಪೋಸ್ಟರ್‌ಗಳನ್ನು ಅಂಟಿಸಿರುವುದನ್ನು ಖಂಡಿಸಿ ಕನ್ನಡ ಸೇನೆ ಇಂದು ಬೀದರ್ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಸುಭಾಷ್ ಕೆ. ನಾಡೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಬಸ್ಸುಗಳ ಮೇಲೆ ಅಂಟಿಸಿದ್ದ ಮಾದಕ ವಸ್ತುಗಳ ಜಾಹೀರಾತು ಪೋಸ್ಟರ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕೆಕೆಆರ್‌ಟಿಸಿ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಜನಸೇವೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವುದು ಅದರ ಮೂಲ ಕರ್ತವ್ಯ ಎಂದು ಕನ್ನಡ ಸೇನೆ ಮುಖಂಡರು ತಿಳಿಸಿದರು. ಆದರೆ, ಸರ್ಕಾರವೇ ಜೀವಕ್ಕೆ ಹಾನಿಕಾರಕವೆಂದು ಎಚ್ಚರಿಕೆ ನೀಡಿರುವ ಮಾದಕ ವಸ್ತುಗಳ ಜಾಹೀರಾತುಗಳನ್ನು ಸಾರ್ವಜನಿಕ ಸಾರಿಗೆ ಬಸ್ಸುಗಳ ಮೇಲೆ ಪ್ರದರ್ಶಿಸುವುದು ಕಾನೂನು ಹಾಗೂ ನೈತಿಕತೆಗೆ ವಿರುದ್ಧ ಎಂದು ಅವರು ಆರೋಪಿಸಿದರು.
ಗ್ರಾಮೀಣ ಹಾಗೂ ಹಳ್ಳಿಭಾಗಗಳಲ್ಲಿ ಸಂಚರಿಸುವ ಬಸ್ಸುಗಳ ಮೇಲಿನ ಇಂತಹ ಜಾಹೀರಾತುಗಳು ಯುವಜನರನ್ನು ವ್ಯಸನದತ್ತ ಆಕರ್ಷಿಸಿ ಸಾಮಾಜಿಕ ಹಾನಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಆದ್ದರಿಂದ, ಸಾಮಾಜಿಕ ಸ್ವಸ್ಥತೆ ಹಾಗೂ ಯುವಜನರ ಭವಿಷ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ತಂಬಾಕು–ಗುಟಕಾ ಜಾಹೀರಾತುಗಳನ್ನು ಕೂಡಲೇ ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ, ತಾಲೂಕ ಅಧ್ಯಕ್ಷ ರಾಜು ಮಂಗಲ್‌ಪೇಟ್, ಜಿಲ್ಲಾ ಉಪಾಧ್ಯಕ್ಷ ಪ್ರಭು ಶೆಟ್ಟಿ ಪಸರಗಿ, ಮಳಸಕಾಂತ ವಾಗೆ, ಸೋಮನಾಥ್ ವರಟ್ಟಿ, ಪರಶುರಾಮ್ ಮೈಸೂರು, ಚನ್ನಬಸವ ಘಾಳೆ, ನಾಗಶೆಟ್ಟಿ ಸಜ್ಜನ್ ಶೆಟ್ಟಿ, ಲಕ್ಷ್ಮಣ್ ಅಲ್ಲುರೆ, ತಿಪ್ಪಾರೆಡ್ಡಿ, ರಮೇಶ್ ಧೂಳು, ಉದಯ ಹೀಬಾರೆ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.