Popular Posts

ಬೆಳೆ ವಿಮೆ ಪರಿಹಾರ ತಾರತಮ್ಯ: ನಿವಾರಣೆಗೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚನೆ -ಪ್ರಿಯಾಂಕ್ ಖರ್ಗೆ

ಕಲಬುರಗಿ, ಆ.10(ಕಕ ವಾರ್ತೆ) ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ತಾರತಮ್ಯವಾಗದಂತೆ ತಾಲೂಕು ಹಂತದಲ್ಲಿ ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಲಾಗುವುದು ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ (ಪ್ರಕೃತಿ ವಿಕೋಪ) ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ನಗರದ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸದರಿ ಸಮಿತಿಗೆ ಅಧಿಕಾರಿಗಳು ಮತ್ತು ಇತರರನ್ನು ನೇಮಿಸುವಂತೆ ಈಗಾಗಲೆ ಡಿ.ಸಿ. ಅವರಿಗೆ ನಿರ್ದೇಶನ ನೀಡಿದ್ದೇನೆ. ಇನು ಕ್ರಾಪ್ ಕಟ್ಟಿಂಗ್ ಎಕ್ಸಪರಿಮೆಂಟ್ ನಿಖರವಾಗಿ ಅರಿಯಲು ನಿಯಮಾವಳಿಯಲ್ಲಿ ಕೆಲವೊಂದು ಬದಲಾವಣೆ ಸಹ ತರಲಾಗುವುದು ಎಂದರು.
ಕಳೆದ ವರ್ಷ ರಾಜ್ಯದಲ್ಲಿ ಮೊದಲನೇ ಸ್ಥಾನ ಮತ್ತು ದೇಶದಲ್ಲಿ ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ, ಸರ್ಕಾರದಿಂದ ಇನ್ಪುಟ್ ಸಬ್ಸಿಡಿ ಪಡೆದಿದ್ದಾರೆ. ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳ ನಿಖರ ವರದಿ ಮತ್ತು ಗ್ರೌಂಡ್ ಟ್ರುತ್ ವರದಿ ಪರಿಣಾಮ ಇದು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ರಾಪ್ ಇನ್ಶೂರೆನ್ಸ್, ಮಿಡ್-ಸೀಸನ್ ಅಡ್ವರ್ಸಿಟಿ ಹಾಗೂ ಇನ್‍ಪುಟ್ ಸಬ್ಸಿಡಿ ಒಳಗೊಂಡಂತೆ ಜಿಲ್ಲೆಯ ರೈತರಿಗೆ ಒಟ್ಟು 3,035 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರವನ್ನು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ ದಾಖಲೆ ಪ್ರಮಣದಲ್ಲಿ ಬೆಳೆ ವಿಮೆನಡಿ 585.72 ಕೋಟಿ ರೂ. ಪರಹಾರ ನೀಡಿದರು ಕೆಲವೆಡೆ ಮಧ್ಯಂತರ ಪರಿಹಾರ ಸಿಕ್ಕ ರೈತರಿಗೆ ಅಂತಿಮ ಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಈ ವರ್ಷ ಅದು ಮರುಕಳಿಸದಂತೆ ರೈತರಿಗೆ ನ್ಯಾಯಯುತ ಪರಿಹಾರ ಸಿಗಲು ಎಚ್ಚರ ವಹಿಸಲಾಗುವುದು. ಇನ್ನು ಕಳೆದ ವರ್ಷ ಕೆಲ ರೈತರಿಗೆ ನ್ಯಾಯಯುತ ಪರಿಹಾರ ಸಿಗದಿರುವುದಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಮ್ಮ ರೈತರಿಗೆ ಕಷ್ಟಕಾಲದಲ್ಲಿ ಕೈ ಹಿಡಿಯುವ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಹೆಚ್ಚು ಪ್ರೇರೇಪಿಸಲಾಗುತ್ತಿದೆ. ಈ ಬಾರಿಯ ಸಹ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ 4,58,609ಕ್ಕೂ ಹೆಚ್ಚು ರೈತರು 5,35,850 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರಸ್ತುತ ವರ್ಷ ಬೆಳೆ ವಿಮೆ ನೋಂದಾಯಿಸಿಕೊಂಡ ರೈತರಲ್ಲಿ ಹೆಸರು, ಉದ್ದು, ಸೋಯಾಬಿನ್, ತೊಗರಿ ಬೆಳೆದ 37,051 ರೈತರಿಗೆ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಅನುಮೋದನೆ ದೊರಕಿಸಕೊಡಲಾಗುವುದು ಎಂದರು.
ಕೇಂದ್ರ ಸರ್ಕಾರ ಬರ ಘೋಷಣೆಗೆ 2017ರಲ್ಲಿ ತಿದ್ದುಪಡಿ ಕಠಿಣ ನಿಯಮಾವಳಿಗಳನ್ನು ತಂದ ಪರಿಣಾಮ ನಮ್ಮ ರೈತಾಪಿ ಜನರಿಗೆ ನಾವು ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ನಿಯಮಾವಳಿ ಸರಳೀಕರಣಗೊಳಿಸುವಂತೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಧೋರಣೆ ನಡೆಸಿದ್ದರಿಂದ ಸುಪ್ರೀಂ ಕೋರ್ಟ್‍ಗೆ ಹೋಗಿ ನಮ್ಮ ರೈತರಿಗೆ ಪರಿಹಾರ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದ ಅವರು, ರೈತರ ಹಿತಕ್ಕಾಗಿ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

ಪ್ರಸ್ತುತ ಸೂಪರ್ ಎಲ್ನಿನೋ ಬಗ್ಗೆಯೂ ಗಮನಹರಿಸಿ ನೆರವು ನೀಡುವಂತೆ ಈಗಾಗಲೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮತ್ತು ಕೇಂದ್ರದ ಗೃಹ ಸಚಿವರ ಗಮನ ಸೆಳೆದಿದ್ದು, ಯಾವ ರೀತಿಯ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬರ ಘೋಷಣೆ ಕೇಂದ್ರದ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಮಾಡಬೇಕಿರುವುದರಿಂದ ಅರ್ಹತಾ ಷರತ್ತು ಪೂರೈಸದ ಹೊರತು ಘೋಷಣೆ ಕಷ್ಟಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading