1
1

ಬೀದರ್: ಪವಿತ್ರ ಶ್ರಾವಣ ಮಾಸದ ಅಂಗವಾಗಿ ನೌಬಾದ್‌ನ ರಾಘವೇಂದ್ರ ಕಾಲೋನಿಯ ಶ್ರೀಗಿರಿ ಆಂಜನೇಯ ದೇವಸ್ಥಾನದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ ಬಿಲ್ವಪತ್ರಿ ಸೇರಿದಂತೆ ವಿವಿಧ ಸಸಿಗಳ ವೃಕ್ಷಾರೋಪಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿಲ್ವಪತ್ರಿ ಸಸಿ ನೆಟ್ಟು ಮಾತನಾಡಿದ ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ಹಾಗೂ ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ ಉಪ್ಪಿನರವ ಅವರು, ಪ್ರತಿಯೊಂದು ದೇವಸ್ಥಾನದಲ್ಲೂ ಹಸಿರೀಕರಣ ಅಭಿಯಾನದಡಿ ಉದ್ಯಾನ ನಿರ್ಮಿಸುವುದರ ಜೊತೆಗೆ ಬಿಲ್ವಪತ್ರಿ ಗಿಡಗಳನ್ನು ಕಡ್ಡಾಯವಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಸಾಕಷ್ಟು ಸ್ಥಳಾವಕಾಶವಿರುವುದರಿಂದ ಅದರ ಸದುಪಯೋಗ ಪಡೆದುಕೊಂಡು ವಿವಿಧ ಬಗೆಯ ಸಸಿಗಳೊಂದಿಗೆ ಬಿಲ್ವಪತ್ರಿ ಗಿಡಗಳನ್ನು ಬೆಳೆಸಿದರೆ, ಶ್ರಾವಣ ಮಾಸ ಮಾತ್ರವಲ್ಲದೆ ವರ್ಷಪೂರ್ತಿ ದೇವರ ಸನ್ನಿಧಿಯಲ್ಲಿ ಬಿಲ್ವಪತ್ರಿಯನ್ನು ಅರ್ಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ಶ್ರಾವಣ ಮಾಸದಲ್ಲಿ ದೇವರ ನಾಮಸ್ಮರಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರವಚನ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ದೇವಸ್ಥಾನಗಳ ಆವರಣದಲ್ಲಿ ಆಲದ, ಹೊಂಗೆ ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಯಿತು. ಪರಿಸರ ಜಾಗೃತಿ ಮೂಡಿಸುವ ಘೋಷಣೆಗಳನ್ನು ಪ್ರದರ್ಶಿಸುವುದರ ಜೊತೆಗೆ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬೋಧಿಸಲಾಯಿತು.
ಗೃಹಿಣಿ ಶಾಂತಮ್ಮ ಪರಿಸರ ಜಾಗೃತಿಯ ಕುರಿತು ಮಾತನಾಡಿದರು. ಹಿರಿಯ ನಾಗರಿಕ ಹುಡುಗೆ ಕಲ್ಯಾಣರಾವ್ ಸ್ವಾಗತಿಸಿದರು. ದತ್ತುರಾವ್ ಪಾಟೀಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ದಿಲೀಪ್ ಪಾಟೀಲ್, ಮಹಾರುದ್ರಪ್ಪ ಮದಕಟ್ಟಿ, ಶ್ರೀಕಾಂತ್ ತುಗಾಂವ, ವಿಶ್ವನಾಥರಾವ್ ಬೆನಕನಳ್ಳಿ, ರಮೇಶ್ ಬಿರಾದಾರ್, ಶಿವರಾಜ ಕಾಳಶೆಟ್ಟಿ, ನಾಗರಾಜ್, ಶಾಂತಕ್ಕ ಟೀಚರ್, ಮಹಾನಂದಾ ಸೇರಿದಂತೆ ಓಣಿಯ ಅನೇಕ ನಿವಾಸಿಗಳು ಭಾಗವಹಿಸಿದ್ದರು.
Subscribe to get the latest posts sent to your email.