1
1

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಭಾನುವಾರ ಪುಷ್ಪಾಲಂಕೃತ ರಥದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಹಾಗೂ ಯು.ಎಸ್.ಎ.ದ ಏಷ್ಯಾ ಇಂಟರ್‍ನ್ಯಾಷನಲ್ ಕಲ್ಚರಲ್ ರಿಸರ್ಚ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕøತ ಹಾವಗಿಲಿಂಗೇಶ್ವರ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಮುಖ್ಯ ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ತಲುಪಿ ಸಮಾರೋಪಗೊಂಡಿತು. ಬ್ಯಾಂಡ್ ಬಾಜಾ, ಜಯ ಘೋಷಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಇದಕ್ಕೂ ಮುನ್ನ ಗ್ರಾಮದ ಪ್ರವೇಶದ ದ್ವಾರದಲ್ಲಿ ಜೆಸಿಬಿ ಮೂಲಕ ಪುಷ್ಪ ವೃಷ್ಟಿ ಮಾಡಲಾಯಿತು. ಕಿವಿ ಗಡಚಿಕ್ಕುವಂತೆ ಪಟಾಕಿ ಸಿಡಿಸಲಾಯಿತು.
ನಂತರ ಮಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಈಶ್ವರ ಖಂಡ್ರೆ ಅವರನ್ನು ಹಾಗೂ ಗೌರವ ಡಾಕ್ಟರೇಟ್‍ಗೆ ಭಾಜನರಾದ ಪ್ರಯುಕ್ತ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಸಮಾಜದವರು ನನ್ನ ಮೇಲೆ ವಿಶ್ವಾಸ ಇಟ್ಟು, ಮಹಾಸಭೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಂಘಟನೆ ಬಲಪಡಿಸಲು ಶಕ್ತಿ ಮೀರಿ ಶ್ರಮಿಸುವೆ. ಸಮಾಜದವರ ಹಿತ ರಕ್ಷಿಸುವೆ ಎಂದು ತಿಳಿಸಿದರು.
ಹಾವಗಿಲಿಂಗೇಶ್ವರ ಶಿವಾಚಾರ್ಯರ ಸಮಾಜೋಧಾರ್ಮಿಕ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಶತಮಾನದ ಹಿಂದೆ ಹಾನಗಲ್ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವರು ಆಯ್ಕೆಯಾಗಿರುವುದು ಭಾಲ್ಕಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಸಂತಸ ಉಂಟು ಮಾಡಿದೆ ಎಂದು ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಭೀಮಣ್ಣ ಖಂಡ್ರೆ ಅವರ ಮನೆತನ ಸಂಸ್ಕಾರಕ್ಕೆ ಹೆಸರಾಗಿದೆ. ಈಶ್ವರ ಖಂಡ್ರೆ ಒಳ್ಳೆಯ ನಡೆ, ನುಡಿಯ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಧರ್ಮದ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯಲಿವೆ. ಮಹಾಸಭಾ ಇನ್ನಷ್ಟು ಬಲಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.