ಬೀದರ್: 2026–2027ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕನಿಷ್ಠ ₹200 ಕೋಟಿಯನ್ನು ತಕ್ಷಣ ಮೀಸಲಿಡುವಂತೆ ಎಮ್.ಜಿ.ಎಶ್.ಪಿ ಸದಸ್ಯರಾದ ಭೀಮಾ ಹೇಳಿದರು.
ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ವತಿಯಿಂದ ಬುಧವಾರ <ನಗರ/ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ₹200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ ಈಗ ಆ ವಾಗ್ದಾನವನ್ನು ನೈಜವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಹೇಳಿದರು.
2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಈ ಸಮುದಾಯಕ್ಕಾಗಿ ಪ್ರತ್ಯೇಕ ಮತ್ತು ಕಡ್ಡಾಯ ಅನುದಾನ ಘೋಷಿಸಲೇಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸುವುದು, ಸಮುದಾಯದ ಸದಸ್ಯರಿಗೆ ವಸತಿ, ಹಾಸ್ಟೆಲ್ ಹಾಗೂ ಶಾರ್ಟ್ ಸ್ಟೇ ಹೋಮ್‌ಗಳನ್ನು ತಕ್ಷಣ ಒದಗಿಸಬೇಕು, ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜೀವನೋಪಾಯ ಮತ್ತು ಸಾಮಾಜಿಕ ಭದ್ರತೆ ಅಡಿ
ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ 2 ಎಕರೆ ಕೃಷಿಯೋಗ್ಯ ಭೂಮಿಯನ್ನು ನೀಡುವುದು, ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುವುದು, ಉದ್ಯಮಶೀಲತೆಗೆ ಬ್ಯಾಂಕ್-ಲಿಂಕ್ ಯೋಜನೆಯಡಿ ಪ್ರತಿ ವ್ಯಕ್ತಿಗೆ ₹2 ಲಕ್ಷ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
ಸ್ವಸಹಾಯ ಗುಂಪುಗಳ ಬಲಪಡಿಸಲು ಅನುದಾನ, ಬಡ್ಡಿರಹಿತ ಸಾಲ, ಮೈತ್ರಿ ಪಿಂಚಣಿಯನ್ನು ತಿಂಗಳಿಗೆ ₹2,000ಕ್ಕೆ ಹೆಚ್ಚಿಸುವುದು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ₹5,000 ವೃದ್ಧಾಪ್ಯ ಪಿಂಚಣಿ ನೀಡಬೇಕು, .ಸರ್ಕಾರಿ ಉದ್ಯೋಗಗಳಲ್ಲಿ ಘೋಷಿಸಿರುವ 1% ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಕೋಚಿಂಗ್ ಒದಗಿಸಬೇಕು ಎಂದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ಜಾರಿಗೊಳಿಸಬೇಕು. ಶಸ್ತ್ರಚಿಕಿತ್ಸೆಯ ನಂತರ ಕನಿಷ್ಠ 6 ತಿಂಗಳು ಪ್ರತಿ ತಿಂಗಳು ₹5,000 ಪುನರ್ವಸತಿ ನೆರವು ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರವನ್ನು ತೆರೆಯಬೇಕು ಎಂದ ಅವರು, ಈ ವರ್ಷದ ಬಜೆಟ್ ನಲ್ಲಿ 200 ಕೋಟಿ ಘೋಷಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಭೀಮಾ ಹೇಳಿದರು.
ಬುದ್ದ ಬೇಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಹಾಗೂ ಸಾಹಿತಿ ಜಗದೀಶ್ವರ ಬಿರಾದಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.
Discover more from ಕಲಿಯುಗದ ಕೂಗು
Subscribe to get the latest posts sent to your email.