1
1

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರಿ ವಿಶ್ವವಿದ್ಯಾಲಯ, ಬೀದರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (NSS) ಇವರ ಸಂಯುಕ್ತಾಶ್ರಯದಲ್ಲಿ “ನಶಾ ಮುಕ್ತ ಭಾರತ ಅಭಿಯಾನ (Nasha Mukta Bharat Abhiyan)” ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗದಲ್ಲಿ ಆಯೋಜಿಸಲಾಯಿತು. ಡಾ. ಇ.ವಿ. ಸ್ವಾಮಿನಾಥನ್ ರವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ಯುವಕರೇ ಯಾವುದೇ ದೇಶದ ನಿಜವಾದ ಶಕ್ತಿ ಮತ್ತು ಸಂಪತ್ತು. ಆದರೆ, ಇಂದಿನ ದಿನಗಳಲ್ಲಿ ದುಶ್ಚಟಗಳು, ವಿಶೇಷವಾಗಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ವ್ಯಸನವು ನಮ್ಮ ಯುವ ಜನತೆಯನ್ನು ಬುಡಸಮೇತ ಹಾಳು ಮಾಡುತ್ತಿದೆ ಎಂದರು ಸರ್ಕಾರಗಳು ಅಭಿಯಾನ ಮೂಲಕ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುತ್ತಿದೆ, ವ್ಯಸನಿಗಳಿಗೆ ಆಸ್ಪತ್ರೆ ಮತ್ತು ಸಮಾಲೋಚನಾ ಕೇಂದ್ರಗಳ ಮೂಲಕ ಮರುಜೀವ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಕೆಡುಕುಗಳ ಬಗ್ಗೆ ಪಾಠ ಹಾಗೂ ಸ್ಪರ್ಧೆಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.
ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಚನ್ನಪ್ಪಗೌಡ ಬಿರಾದಾರ ರವರು ಮಾತನಾಡಿ ದೇಶವನ್ನು ಮಾದಕ ವಸ್ತುಗಳ ಮುಕ್ತ ಭವಿಷ್ಯದತ್ತ ಕೊಂಡೊಯ್ಯುವಲ್ಲಿ ಯುವಕರ ಪಾತ್ರವನ್ನು ಒತ್ತಿ ಹೇಳುವ ಪ್ರತಿಜ್ಞೆಯು ಆರೋಗ್ಯಕರ, ಸುರಕ್ಷಿತ ಸಮಾಜವನ್ನು ರಚಿಸುವಲ್ಲಿ ನಮ್ಮ ಸಾಮೂಹಿಕ ಜವಾಬ್ದಾರಿಯ ಪ್ರಬಲ ಜ್ಞಾಪನೆಯಾಗಿದೆ. ಒಟ್ಟಾಗಿ, ನಾವು ಬದಲಾವಣೆಯನ್ನು ತರಲು ಮತ್ತು ಮಾದಕ ವಸ್ತುಗಳ ಮುಕ್ತ ಸಮುದಾಯವನ್ನು ಮಾಡಲು ಬದ್ಧರಾಗಬೇಕು ಎಂದರು.
ಡಾ. ಯಶವಂತ ಪಾಟೀಲ, ಸಂಸ್ಥಾಪಕ ಅಧ್ಯಕ್ಷರು, ಫೇಡರೇಷನ್ ಆಫ್ ಕಮ್ಯೂನಿಟಿ ರೇಡಿಯೋ ಸ್ಟೇಷನ್ , ನವ ದೇಹಲಿ ಇವರು ಮಾತನಾಡಿದ ಅವರು ಆರೋಗ್ಯಕರ, ಬಲವಾದ ಮತ್ತು ಸುಂದರವಾದ ಸಮಾಜವನ್ನು ನಿರ್ಮಿಸಲು ಕೈಜೋಡಿಸೋಣ. ಮಾದಕ ವಸ್ತುಗಳನ್ನು ತ್ಯಜಿಸೋಣ, ಜೀವನವನ್ನು ಪ್ರೀತಿಸೋಣ, ಪ್ರೀತಿ-ಬಾಂಧವ್ಯದಿಂದ ಸದೃಢ ಸಮಾಜ ನಿರ್ಮಿಸೊಣ್ಣ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ “ನಶಾ ಮುಕ್ತ ಭಾರತ ಅಭಿಯಾನದ”ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನ ಡೀನ್ರವರಾದ ಡಾ. ಎಮ್.ಕೆ.ತಾಂದಳೆ ರವರು ಮಾತನಾಡಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಈ ಕುರಿತಂತೆ ವಿಶೇಷ ತಪಾಸಣೆಗಳು ನಡೆಸುತ್ತಿದ್ದಾರೆ, ಅಲ್ಲದೇ ರಾಜ್ಯ ಘನ ಸರ್ಕಾರವು Drug Free karnataka ಎಂಬ App ಬಿಡುಗಡೆಗೊಳಿಸಿದ್ದು, 2028ಕ್ಕೆ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಮುಕ್ತ ಕರ್ನಾಟಕ ಮಾಡಲು ರಾಜ್ಯ ಸರ್ಕಾರವು ದೃಢ ಸಂಕಲ್ಪ ಮಾಡಿದೆ ಎಂದು ವಿವರಿಸಿದರು. ಕರ್ನಾಟಕ ಸರ್ಕಾರ ‘ಬೇಡ ಬ್ರೋ‘ (Beda Bro) ಎನ್ನುವ ವಿಶೇಷ ಯುವ-ಸ್ನೇಹಿ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಆರಂಭಿಸಿದೆ ಮುಖ್ಯ ಉದ್ದೇಶಗಳೆಂದರೆ ಮಾದಕ ವಸ್ತುಗಳಿಗೆ ನೋ ಹೇಳಿ: ಸ್ನೇಹಿತರ ಒತ್ತಡ ಅಥವಾ ಇತರೆ ಕಾರಣಗಳಿಂದ ಡ್ರಗ್ಸ್ ಅಥವಾ ಗಾಂಜಾದಂತಹ ನಶೆಗೆ ದಾಸರಾಗದಂತೆ ಯುವ ಜನತೆಗೆ ಸರಳ ಭಾಷೆಯಲ್ಲಿ ಅರಿವು ಮೂಡಿಸುವುದು. ಸಹಾಯವಾಣಿ ಮತ್ತು ಮಾಹಿತಿ: ಡ್ರಗ್ಸ್ ಮಾರಾಟ ಅಥವಾ ಸಾಗಾಣಿಕೆ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಅಥವಾ ವಿದ್ಯಾರ್ಥಿಗಳು ಪೊಲೀಸ್ ವಾಟ್ಸಾಪ್ ಹೆಲ್ಪ್ಲೈನ್ (8277948080) ಮೂಲಕ ಗೌಪ್ಯವಾಗಿ ಮಾಹಿತಿ ನೀಡಲು ಉತ್ತೇಜಿಸುವುದು. ಆರೋಗ್ಯಕರ ಜೀವನಶೈಲಿ: ಯುವಕರು ಕ್ರೀಡೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುವಂತೆ ಪ್ರೇರೇಪಿಸುವುದು. ಇವುಗಳ ಮುಖ್ಯ ಉದ್ದೇಶವಾಗಿದೆ ಎಂದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ದೇಶಾದ್ಯಂತ ‘ನಶಾ ಮುಕ್ತ ಭಾರತ ಅಭಿಯಾನ’ (ಮಾದಕ ದ್ರವ್ಯ ಮುಕ್ತ ಭಾರತ ಆಂದೋಲನ) ಹಮ್ಮಿಕೊಂಡಿದೆ. ಯುವಕರಲ್ಲಿ ಮತ್ತು ಸಮಾಜದಲ್ಲಿ ವ್ಯಸನ ಮುಕ್ತ ಜೀವನಶೈಲಿ ಮೂಡಿಸಲು ಇದು ಜಾಗೃತಿ ಸಭೆಗಳು, ರ್ಯಾಲಿಗಳು ಹಾಗೂ ಪ್ರತಿಜ್ಞೆ ಕಾರ್ಯಕ್ರಮಗಳನ್ನು ನಡೆಸುತ್ತದೆ ಇದು ಶ್ಲಾಘನಿಯ ಕಾರ್ಯವಾಗಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಿಜಯಕುಮಾರ ಮತ್ತು ಡಾ. ಮಾಲಾಶ್ರೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜನೆ ಮಾಡಿದರು. ನಂದಿನಗರ ಆವರಣದ ಎಲ್ಲ ಬೊಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದರು.
Subscribe to get the latest posts sent to your email.